ಕಣಿವೆ, ಡಿ. ೯ : ದುಬಾರೆ ಕಾವೇರಿ ನದಿ ದಂಡೆಯಲ್ಲಿನ ಸಾಕಾನೆ ಶಿಬಿರದಲ್ಲಿನ ಸಾಕಾನೆ ತಕ್ಷ ಅನಾರೋಗ್ಯದಿಂದ ತಾ. ೬ ರಂದು ರಾತ್ರಿ ಮೃತಪಟ್ಟಿದೆ. ಕಳೆದ ಹತ್ತು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸಾಕಾನೆಯನ್ನು ಉಳಿಸಲು ಪಶುವೈದ್ಯ ಡಾ.ಮುಜೀಬ್ ಸಾಕಷ್ಟು ಶ್ರಮಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಮಾಹಿತಿ ನೀಡಿದರು. ಕೊಡಗು ಅರಣ್ಯ ಸಂರಕ್ಷಣಾ ಅಧಿಕಾರಿ ಸೋನಲ್ ಅವರ ಸಮ್ಮುಖದಲ್ಲಿ ತಾ.೯ ರಂದು ಪಶು ವೈದ್ಯರಾದ ಡಾ. ಚಿಟ್ಟಿಯಪ್ಪ, ಡಾ. ಸಂಜೀವ್ ಕುಮಾರ್ ಸಿಂಧೆ ಹಾಗೂ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ತಕ್ಷ ಆನೆಯನ್ನು ೨೮-೧೨-೨೦೨೪ ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸೆರೆ ಹಿಡಿದು ದುಬಾರೆ ಶಿಬಿರದ ಕ್ರಾಲ್‌ಗೆ ಸೇರಿಸಲಾಗಿತ್ತು. ಬಳಿಕ ೨೧/೦೭/೨೦೨೫ ರಂದು ಕ್ರಾಲ್‌ನಿಂದ ಹೊರ ಬಿಡಲಾಗಿತ್ತು. ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಿ.ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ದುಬಾರೆ ಹಾಡಿಯ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್, ವೆಂಕಟೇಶ್ ನಲವಾಡಿ ಹಾಗೂ ಸಿಬ್ಬಂದಿಗಳಿದ್ದರು.