ಪಾಲಿಬೆಟ್ಟ, ಡಿ. ೭: ಚುಮುಚುಮು ಚಳಿಯ ನಡುವೆ ಬೆಳ್ಳಂಬೆಳಗ್ಗೆ ಕಾಡುಪ್ರಾಣಿಗಳ ಭಯವನ್ನು ಲೆಕ್ಕಿಸದೆ, ಮಕ್ಕಳು ಮಹಿಳೆಯರು ಯುವಕರು ಹಾಗೂ ವೃದ್ಧರು ಬರಿಗಾಲಿನಲ್ಲಿ ಓಡಿ ಸಂಭ್ರಮಿಸಿದರು. ಪಾಲಿಬೆಟ್ಟದಲ್ಲಿ ಆಯೋಜಿತ ಈ ಕಾರ್ಯಕ್ರಮದಲ್ಲಿ ಬಾಂಬೆ, ಕಲ್ಕತ್ತಾ, ದೆಹಲಿ, ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆಗಳಿಂದ ೧೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
ಪಾಲಿಬೆಟ್ಟ ಚೆಶೈರ್ ಹೋಂ ಶಾಲೆಯ ವಿಶೇಷ ಚೇತನ ಮಕ್ಕಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು ಒಂದು ಕಿಲೋಮೀಟರ್ ದೂರ ಮ್ಯಾರಥಾನ್‌ನಲ್ಲಿ ಸಾಗಿದರು. ೫ ಕಿ.ಮೀ ಓಟದಿಂದ ಹಿಡಿದು ೪೨ ಕಿ.ಮೀ. ವರೆಗೂ ವಿವಿಧ ವಿಭಾಗಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಮ್ಯಾರಥಾನ್‌ಗೆ ಮೆರುಗು ನೀಡಿದರು.
ಕೊಡಗು ವೆಲ್‌ನೆಸ್ ಫೌಂಡೇಶನ್ ಹಾಗೂ ನಟ ಮಿಲಿಂಡ್ ಸೋಮನ್ ಅವರ ಸಹಯೋಗದಲ್ಲಿ ಒಂಬತ್ತನೇ ವರ್ಷದ ಬರಿಗಾಲಿನ ಮ್ಯಾರಥಾನ್ ಕಾರ್ಯಕ್ರಮ ಇದಾಗಿತ್ತು. ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಕುಡಿಯುವ ನೀರು ಹಾಗೂ ಕಾಫಿಯನ್ನು ತೆಂಗಿನ ಚಿಪ್ಪಿನಲ್ಲಿ ನೀಡುತ್ತಿರುವುದು ಹಾಗೂ ಕೊಡಗಿನ ವಾಲಗದೊಂದಿಗೆ ವಿಜೇತರನ್ನು ಸ್ವಾಗತಿಸುವ ಕ್ರಮ ವಿಶೇಷವಾಗಿತ್ತು.
ಮಿಲಿಂಡ್ ಸೋಮನ್ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ದೇಶದ ನಾನಾ ಭಾಗಗಳಿಂದ ನೂರಾರು ಮಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ, ಆರೋಗ್ಯ ಕಾಳಜಿಯ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮ್ಯಾರಥಾನ್ ಸಹಕಾರಿಯಾಗಿದ್ದು ನಡಿಗೆ, ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕೂರ್ಗ್ ವೆಲ್‌ನೆಸ್ ಫೌಂಡೇಶನ್ ಸ್ಥಾಪಕ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಮಾತನಾಡಿ, ವಿಶ್ವದ ಏಕೈಕ ಬರಿಗಾಲಿನ ಮ್ಯಾರಥಾನ್ ಇದಾಗಿದ್ದು, ಆರೋಗ್ಯ ಹಾಗೂ ಪರಿಸರ ಕಾಳಜಿಯನ್ನು ಮುಂದಿಟ್ಟುಕೊAಡು ೨೦೧೪ರಲ್ಲಿ ಸ್ಥಾಪಿಸಿದ ಕೂರ್ಗ್ ವೆಲ್‌ನೆಸ್ ಫೌಂಡೇಶನ್ ವನ್ಯಜೀವಿ, ಪರಿಸರ ಸಂರಕ್ಷಣೆಯೊAದಿಗೆ ಕೊಡಗು ಪ್ಲಾಸ್ಟಿಕ್ ಮುಕ್ತ ಪ್ರದೇಶ ಆಗಬೇಕು ಎಂಬ ಆಶಯ ಹೊಂದಿದೆ. ಆರೋಗ್ಯ ಕಾಳಜಿಯೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಕೂಡ ಹೇಳಿದರು. ಬಹುಮಾನ ವಿತರಣೆ : ೫ ಕಿ.ಮೀ ಓಟದ ಬಾಲಕರ ವಿಭಾಗದಲ್ಲಿ ಸುಂದರೇಸನ್ ಪ್ರಥಮ, ಮದನ್ ವೈ.ವಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನವ್ಯ ಮಂದಣ್ಣ ಪ್ರಥಮ, ತಾರಾ ಗಣಪತಿ ದ್ವಿತೀಯ ಬಹುಮಾನಗಳಿಸಿದರು. ೬೫ ವರ್ಷ ಮೇಲ್ಪಟ್ಟವರಲ್ಲಿ ಪುರುಷರ ವಿಭಾಗದಲ್ಲಿ ಪಿ.ಎ ಮಹಮ್ಮದ್ ಪ್ರಥಮ, ಮಹಿಳೆಯರ ವಿಭಾಗದಲ್ಲಿ ವಿಜಯ ಪ್ರಥಮ ಸ್ಥಾನ ಗಳಿಸಿದರು. ೧೦ ಕಿ.ಮೀ ಓಟದ ಪುರುಷರ ವಿಭಾಗದಲ್ಲಿ ಸುದೀಪ್ ಪೂಜಾರಿ ಶಿರಸಿ ಪ್ರಥಮ, ಪ್ರವೀಣ್ ಜೋಗ್ ಲೇಕರ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ದೀಪಾ ಕೆ ಎಸ್ ಪ್ರಥಮ, ನಯನಾ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದರು.
೨೧ ಕಿ.ಮೀ. ಪುರುಷರ ವಿಭಾಗದ ಓಟದ ಸ್ಪರ್ಧೆಯಲ್ಲಿ ಗೌತಮ್ ಶೆಟ್ಟಿ ಪ್ರಥಮ, ನಿತಿನ್ ಕುಮಾರ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಮೀರಾ ಪ್ರಥಮ ಸ್ಥಾನ ಪಡೆದರು. ೪೨ ಕಿ.ಮೀ. ಸ್ಪರ್ಧೆಯಲ್ಲಿ ಮಂಗಳೂರಿನ ಗಣಪತಿ ಯಲ್ಲಪ್ಪ ಚಾಂಪಿಯನ್, ರಂಗಣ್ಣ ನಾಯಕರ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ನೃತ್ಯ ಮಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಈ ಸಂದರ್ಭ ಚೆಶೈರ್ ಹೋಂನ ಮುಖ್ಯ ಶಿಕ್ಷಕÀ ಶಿವರಾಜ್ ಹಾಜರಿದ್ದರು.
-ವರದಿ : ಪುತ್ತಂ ಪ್ರದೀಪ್