ವರದಿ : ಎನ್.ಎನ್. ದಿನೇಶ್

*ಗೋಣಿಕೊಪ್ಪ, ಡಿ. ೭: ತಿತಿಮತಿ ಗ್ರಾಮದಲ್ಲಿ ೨ನೇ ವರ್ಷದ ಹನುಮೋತ್ಸವ ಅಂಗವಾಗಿ ನಡೆದ ಶೋಭಾಯಾತ್ರೆ ಜನಮನ ಸೆಳೆಯುವುದರೊಂದಿಗೆ ೬ ದಿನಗಳ ಕಾಲದ ಉತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ಹನುಮಂತ ನಾಮಸ್ಮರಣೆಯೊಂದಿಗೆ ಸಾಗಿದ ಮಂಟಪಗಳ ಶೋಭಾಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿ ಉತ್ಸವಕ್ಕೆ ಕಳೆ ತಂದರು. ತಿತಿಮತಿ ಹನುಮೋತ್ಸವ ಸಮಿತಿ, ಶ್ರೀ ರಾಮ ಮಂದಿರ ವತಿಯಿಂದ ಎರಡನೇ ವರ್ಷದ ಹನುಮೋತ್ಸವ ಬಾಳುಮನಿ ಗಣಪತಿ ದೇವಸ್ಥಾನದಿಂದ ತಿತಿಮತಿ ಶ್ರೀರಾಮ ಮಂದಿರದವರೆಗೆ ಶೋಭಾಯಾತ್ರೆ ಸಾಗಿತು. ಭಜನೆ ಕುಣಿತ, ಡೊಳ್ಳು ಕುಣಿತ, ಚಂಡೆ ವಾದ್ಯ, ಜೊತೆಗೆ ಹನುಮನ ವಿವಿಧ ಸ್ತಬ್ಧಚಿತ್ರಗಳ ಜೊತೆಗೆ ಕೇಸರಿ ಧ್ವಜಗಳ ಮುಗಿಲು ಚುಂಬಿಸುವ ಹಾರಾಟ ಹಸಿರು ಕಾನನದ ನಡುವಿನ ರಸ್ತೆಗಳಲ್ಲಿ ಕೇಸರಿಯಾಗಿಸಿತ್ತು. ವಿವಿಧ ಗ್ರಾಮಗಳಿಂದ ಬಂದ ಹನುಮ ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಮಜ್ಜಿಗೆ ವಿತರಣೆ ನಡೆಯಿತು. ಪೊನ್ನಂಪೇಟೆ ಭಗವತಿ ಯವಕರ ಸಂಘ, ಶ್ರೀ ರಾಮಂದಿರ ಸೇವಾ ಸಮಿತಿ ಸೇರಿದಂತೆ ಒಟ್ಟು ೬ ಮಂಟಪ ಗಮನ ಸೆಳೆಯಿತು. ಬೆಂಗಳೂರಿನ ವಿಶ್ವ ಹಿಂದೂ ಪರಿಷತ್ ಕ್ಷತ್ರೀಯ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಭೌತಿಕ್ ನಡೆಸಿ, ರಾಮನ ಆದರ್ಶವನ್ನು ಮೈಗೂಡಿಸಿಕೊಂಡು ಬದುಕು ನಡೆಸಬೇಕು. ಹಿಂದೂ ಧರ್ಮದಲ್ಲಿ ಅಪಾರವಾದ ಧಾರ್ಮಿಕ ಸಂಪತ್ತು ಇದೆ. ಇದನ್ನು ಕಂಡು ಇತರ ಧರ್ಮದವರು ಹಿಂದೂಗಳ ಶಕ್ತಿಯನ್ನು ಮತಾಂತರದ ಮೂಲಕ ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದ ಅವರು, ಬುಡಕಟ್ಟು ಸಮುದಾಯದವರೇ ಹೆಚ್ಚು ಆಮಿಷಗಳಿಗೆ ಒಳಗಾಗಿ ಮತಾಂತರಗೊಳ್ಳುತ್ತಿದ್ದಾರೆ. ಹೀಗೆ ಮತಾಂತರಗೊAಡವರನ್ನು ಮತ್ತೆ ಕರೆತರುವ ಜಾಗೃತಿ ಕಾರ್ಯ ನಡೆಯಬೇಕಾಗಿದೆ ಎಂದು ಕರೆ ನೀಡಿದರು.

ಬುಡಕಟ್ಟು ಸಮುದಾಯದ ಗುರುಗಳಾದ ಹರೀಶ್ ಪಿರಿಯಾಪಟ್ಟಣ, ಸಮಿತಿ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ, ಪ್ರಮುಖರಾದ ಎನ್.ಎನ್. ಅನೂಪ್ ಕುಮಾರ್, ಸಿದ್ದರಾಜು, ಮನು ನಂಜಪ್ಪ ವಿ.ಎಸ್. ಸುಬ್ರಮಣಿ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಯಮುನಾ ಚಂಗಪ್ಪ, ಅಮ್ಮತ್ತಿರ ಗಣೇಶ್, ಗುಮ್ಮಟೀರ ಕಿಲನ್ ಗಣಪತಿ, ನೆಲ್ಲಿರ ಚಲನ್, ಮೂಕಂಡ ವಿಜು ಸುಬ್ರಮಣಿ, ಸುವಿನ್ ಗಣಪತಿ, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಹನುಮೋತ್ಸವ ಸಮಿತಿ ಪ್ರಮುಖರು ಇನ್ನಿತರರು ಇದ್ದರು. ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ನೇತೃತ್ವದ ಪೋಲಿಸ್ ತಂಡ ಭದ್ರತೆ ಒದಗಿಸಿತು.

ಆರು ದಿನಗಳ ಕಾಲ ತಿತಿಮತಿ ಗ್ರಾಮದಲ್ಲಿ ಹನುಮನ ಆರಾಧನೆ ನಡೆಯಿತು. ಹನುಮ ಮಾಲಾಧಾರಣೆ, ಆಂಜನೇಯ ಹೋಮ, ಹನುಮಂತನ ಭಜನೆ, ಜತೆಗೆ ಕ್ರೀಡೆಗಳಲ್ಲಿ ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು, ವಿವಿಧ ಕಲಾತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.