ಶ್ರೀಮಂಗಲ, ಡಿ. ೩: ಪೊನ್ನಂಪೇಟೆ ತಾಲೂಕಿನ ಹೈಸೂಡ್ಲೂರು ಮತ್ತು ಕೋಣಗೇರಿ ಗ್ರಾಮದಲ್ಲಿ ಒಟ್ಟು ರೂ. ೨೩.೫೮ ಲಕ್ಷದ ಪ್ರತ್ಯೇಕವಾಗಿ ಪೂರ್ಣಗೊಂಡಿರುವ ೧೧ ಕೆವಿಎ ವಿದ್ಯುತ್ ಮಾರ್ಗದ ರೀ ರೂಟಿಂಗ್ ಹಾಗೂ ರೀ ಕಂಡಕ್ಟರಿAಗ್ ಕಾಮಗಾರಿಯ ಉದ್ಘಾಟನೆಯನ್ನು ವೀರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ನೆರವೇರಿಸಿದರು.
ಹೈಸೂಡ್ಲೂರು ಗ್ರಾಮದ ಮಹಾದೇಶ್ವರ ದೇವಸ್ಥಾನದಿಂದ ಐಗುಂದವರೆಗೆ ೨.೯ ಕಿ.ಮೀ. ದೂರದ ರೂ.೧೪.೭೧ ಲಕ್ಷ ಅನುದಾನದಲ್ಲಿ ೯೫ ವಿದ್ಯುತ್ ಕಂಬ ಅಳವಡಿಸಿರುವ ಕಾಮಗಾರಿಯನ್ನು ಹಾಗೂ ಹುದಿಕೇರಿ ಕೋಣಗೇರಿ ಗ್ರಾಮದ ಜನತಾ ಪ್ರೌಢಶಾಲೆಯಿಂದ ಕೋಣಗೇರಿ ಪ್ರಾಥಮಿಕ ಶಾಲೆವರೆಗೆ ೧.೬ ಕಿ. ಮೀ. ಅಂತರದ ರೂ ೮.೮೭ ಲಕ್ಷ ಅನುದಾನದಲ್ಲಿ ೫೨ ವಿದ್ಯುತ್ ಕಂಬಗಳನ್ನು ಅಳವಡಿಸಿ ನಿರ್ಮಿಸಿರುವ ಹೊಸ ೧೧ ಕೆವಿಎ ವಿದ್ಯುತ್ ಮಾರ್ಗದ ಪ್ರತ್ಯೇಕ ಕಾಮಗಾರಿಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಂಧನ ಇಲಾಖೆ ವತಿಯಿಂದ ಕೊಡಗು ಜಿಲ್ಲೆಗೆ ರೂ.೨೧೦ ಕೋಟಿ ವಿದ್ಯುತ್ ಕಾಮಗಾರಿಗಾಗಿ ಬಿಡುಗಡೆಯಾಗಿದ್ದು, ಇದರಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ೧೨೮ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದರಲ್ಲಿ ನೂತನ ವಿದ್ಯುತ್ ಕಂಬ, ಇನ್ಸೂಲೇಟೆಡ್ ತಂತಿ, ಹೊಸ ಟ್ರಾನ್ಸ್ಫಾರ್ಮರ್, ಕಂಡಕ್ಟರ್ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು ಇವೆಲ್ಲ ಈ ಬಹುದೊಡ್ಡ ಯೋಜನೆಯಲ್ಲಿ ಸೇರಿದೆ ಎಂದರು.