ಸೋಮವಾರಪೇಟೆ, ಡಿ.೨: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆ ಬಳಿಯ ೨ನೇ ವಾರ್ಡ್ನಲ್ಲಿ ಮಳೆಗಾಲದ ಸಂದರ್ಭ ಬರೆಕುಸಿತದ ಆತಂಕ ಎದುರಾಗಿರುವ ಹಿನ್ನೆಲೆ, ಗ್ರಾಮಸ್ಥರ ಮನವಿ ಮೇರೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಪ್ರದೇಶದಲ್ಲಿ ಸುಮಾರು ೧೫೦ ಕುಟುಂಬಗಳು ವಾಸಿಸುತ್ತಿದ್ದು, ಈ ಪೈಕಿ ೨೫ ಕುಟುಂಬಗಳ ಮನೆಯ ಹಿಂಭಾಗ ಪ್ರತಿ ಮಳೆಗಾಲದಲ್ಲೂ ಬರೆ ಕುಸಿಯುತ್ತಿದೆ. ಇದರಿಂದಾಗಿ ಮನೆಗಳ ಗೋಡೆಗಳು ಬಿರುಕುಬಿಟ್ಟು, ಆತಂಕ ಉಂಟಾಗಿದೆ ಎಂದು ಗ್ರಾಮಸ್ಥರು, ತಹಶೀಲ್ದಾರ್ ಗಮನ ಸೆಳೆದರು.

ಬಹುತೇಕ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಸುಮಾರು ಆರು ತಿಂಗಳು ಸುರಿದ ಭಾರಿ ಮಳೆಯಿಂದ ಹೆಚ್ಚು ಸಮಸ್ಯೆಯಾಗಿದೆ. ಜನರು ಭಯದಿಂದ ವಾಸಿಸುತ್ತಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ತಡೆಗೋಡೆ ನಿರ್ಮಿಸಬೇಕಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ವಾರ್ಡ್ ಸದಸ್ಯ ಸುರೇಶ್ ಶೆಟ್ಟಿ ಮನವಿ ಮಾಡಿದರು.

ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಈ ಸ್ಥಳವನ್ನು ತುರ್ತಾಗಿ ಸರ್ವೇ ನಡೆಸಿ ತಡೆಗೋಡೆ ನಿರ್ಮಿಸಲು ಯೋಜನೆ ತಯಾರಿಸುವಂತೆ ಸೂಚಿಸಿದರು. ಆದಷ್ಟು ಶೀಘ್ರವಾಗಿ ತಡೆಗೋಡೆ ನಿರ್ಮಿಸಲು ಕ್ರಮವಹಿಸಲಾಗುವುದು. ಈಗಾಗಲೇ ಶಾಸಕರು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯ ಬಗ್ಗೆ ತಿಳಿಸಿ, ಕ್ರಮವಹಿಸುವಂತೆ ಸೂಚಿಸಿದ್ದಾರೆ ಎಂದರು. ಈ ಸಂದರ್ಭ ಗ್ರಾಮಸ್ಥರಾದ ಫ್ರಾನ್ಸಿಸ್, ಅನಿಲ್, ರಫೀಕ್, ಮಮತ, ನೀವ್ಯಶ್ರೀ ಸೇರಿದಂತೆ ಇತರರು ಇದ್ದರು.