ನಾಪೋಕ್ಲು, ಡಿ. ೧: ಸಮೀಪದ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿ ಸದಸ್ಯರು ಕೊಟ್ಟಮುಡಿಯಿಂದ ಕಾವೇರಿ ನದಿ ಸೇತುವೆವರೆಗೆ ಹದಗೆಟ್ಟ ರಸ್ತೆಯಲ್ಲಿ ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಡಿಕೇರಿ - ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಕೊಟ್ಟಮುಡಿಯಿಂದ ಕಾವೇರಿ ನದಿ ಸೇತುವೆಯವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ತೊಡಕುಂಟಾಗಿ ಇಲ್ಲಿ ನಿತ್ಯವೂ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದ್ದವು. ರಸ್ತೆ ದುರಸ್ತಿಗೆ ಒತ್ತಾಯಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು ತಮ್ಮ ವಾಹನದಲ್ಲೇ ಮಣ್ಣು ತಂದು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ಗುಂಡಿಗಳಿಗೆ ಮಣ್ಣು, ಕಲ್ಲು ತುಂಬಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಶ್ರಮದಾನದಲ್ಲಿ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಅಧ್ಯಕ್ಷ ಶೌಕತ್ ಆಲಿ ಕೆ.ಎಚ್, ಉಪಾಧ್ಯಕ್ಷ ನೌಶದ್ ಹೆಚ್.ಎಂ, ಕಾರ್ಯದರ್ಶಿ ರಹಿಂ ಕೆ.ಎ, ಸಹ ಕಾರ್ಯದರ್ಶಿ ಮಹಮ್ಮದ್ ಕೆ.ಕೆ ಹಾಗೂ ಇತರ ಪದಾಧಿಕಾರಿ, ಸದಸ್ಯರು ಪಾಲ್ಗೊಂಡಿದ್ದರು.