ಚೆಯ್ಯಂಡಾಣೆ, ಡಿ. ೧ : ನರಿಯಂದಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಚೆಯ್ಯಂಡಾಣೆಯಲ್ಲಿ ನಡೆಯಿತು. ಸ್ಥಳೀಯ ಲಕ್ಷೀ ಮಹಿಳಾ ಸಮಾಜದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಳೆದ ಗ್ರಾಮಸಭೆಯ ನಡವಳಿಕೆ ವರದಿಯನ್ನು ಕರವಸೂಲಿಗಾರ ದಿನೇಶ್ ಕುಮಾರ್ ಮಂಡಿಸಿದರು.
ಸಾರ್ವಜನಿಕರ ಪರವಾಗಿ ಜೈನೀರ ರಾಜ್ ಕುಮಾರ್ ಜೆಜೆಎಂ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಕಾಡಾನೆ ಸಮಸ್ಯೆ ಬಗ್ಗೆ ಮಾತನಾಡಿ ೩ ಅಡಿ ಆಳಕ್ಕೆ ಅಳವಡಿಸಬೇಕಾದ ನೀರಿನ ಪೈಪ್ಗಳನ್ನು ಒಂದು ಅಡಿ ಆಳಕ್ಕೆ ಮಾತ್ರ ಅಳವಡಿಸಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಿರಂತರ ವಿದ್ಯುತ್ ಸಮಸ್ಯೆಯಿಂದ ಗ್ರಾಮ ಕಗ್ಗತ್ತಲಲ್ಲಿದೆ, ಕಿರಿಯ ಅಭಿಯಂತರರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ, ೪ ಆನೆಗಳನ್ನು ಹಿಡಿಯಲು ಆದೇಶ ದೊರಕಿದ್ದು, ಒಂದು ಆನೆಯನ್ನು ಮಾತ್ರ ಹಿಡಿಯಲಾಗಿದೆ. ಉಳಿದ ಆನೆ ಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಧ್ವನಿಗೂಡಿಸಿ ದಿನಕ್ಕೆ ೧೫ ರಿಂದ ೨೦ ಬಾರಿ ವಿದ್ಯುತ್ ಕಟ್ ಮಾಡಲಾಗುತ್ತಿದೆ. ವಿದ್ಯುತ್ ಕಟ್ನಿಂದ ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ ಎಂದು ಚೆಸ್ಕಾಂ ಅಧಿಕಾರಿ ಚೀತ್ರೆಶ್ ಅವರನ್ನು ತರಾಟೆಗೆ ತೆಗೆದು ಕೊಂಡರು.
ಎಡಪಾಲದ ಕೆ.ಯು. ಶಾಫಿ, ಗ್ರಾ.ಪಂ. ಸದಸ್ಯ ಮಮ್ಮದ್, ಅರಪಟ್ಟು ಗ್ರಾಮದ ಕೋಡಿರ ತಮ್ಮಯ್ಯ,ಚೆಯ್ಯಂಡಾಣೆ ಸಿ.ಎ.ರಜಾಕ್ ಮತ್ತಿತರರು ಜೆಜೆಎಂ ಕಾಮಗಾರಿ ಕಳಪೆಯಾಗಿರುವುದನ್ನು ಖಂಡಿಸಿದರು. ಬಿದ್ದೇರಿಯಂಡ ದೇವಯ್ಯ, ಕರಡ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಮಾತನಾಡಿ, ಕರಡ ಸರ್ಕಾರಿ ಶಾಲೆಗೆ ದಾನವಾಗಿ ನೀಡಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹಲವಾರು ಬಾರಿ ಸಂಬAಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ, ಜಮ್ಮಾ ಜಾಗವನ್ನು ಪೈಸಾರಿ ಜಾಗ ಎಂದು ದಾಖಲೆ ಮಾಡಲಾಗಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆಯ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಕೂಡಲೇ ೨ ಆನೆಗಳನ್ನು ಹಿಡಿಯಲು ಅನುಮತಿಗೆ ಅರ್ಜಿ ಸಲ್ಲಿಸಿದ್ದೇವೆ. ಆದೇಶ ಸಿಕ್ಕಿದ ಕೂಡಲೇ ಎರಡು ಆನೆಗಳನ್ನು ಹಿಡಿಯಲು ಕ್ರಮಕೈಗೊಳ್ಳುವ ಭರವಸೆ ನೀಡಿದರು, ಕಾಡಾನೆ ಕಾಟ ಇರುವ ಸ್ಥಳಗಳಿಗೆ ಸೋಲಾರ್ ದೀಪ ಅರಣ್ಯ ಇಲಾಖೆಯಿಂದ ದೊರೆಯುತ್ತಿದ್ದು ಅದನ್ನು ಆದಷ್ಟು ಶೀಘ್ರ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನೀರಿನ ಸಮಸ್ಯೆಗೆ ಜೆಜೆಎಂನ ತೌಸೀಫ್ ಮಾತನಾಡಿ ಹಲವಾರು ಕಾಮಗಾರಿಗಳು ಪೂರ್ಣಗೊಂಡಿದ್ದು ನೀರಿನ ಸಮಸ್ಯೆಗೆ ಕೂಡಲೇ ಮುಕ್ತಿ ದೊರಕಲಿದೆ, ಎಲ್ಲಾ ಮನೆಗಳಿಗೂ ನೀರು ದೊರೆಯಲಿದೆ. ಎಡಪಾಲ ಹಾಗೂ ಚೇಲಾವರದಲ್ಲಿ ಪೈಪ್ ಅಳವಡಿಕೆಯಲ್ಲಿ ಲೋಪಗಳಿದ್ದರೆ ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದರು. ಚೆಸ್ಕಾಂ ಇಲಾಖೆಯ ಜೆಇ ಚಿತ್ರೇಶ್ ಪ್ರತಿಕ್ರಿಯೆ ನೀಡಿ ಎಲ್ಲಾ ಸಮಸ್ಯೆಗಳಿಗೆ ಸ್ವಂದಿಸಿ ಪರಿಹರಿಸಿ ಕೊಡಲಾಗುವುದು, ವಿದ್ಯುತ್ ಬಲವರ್ಧನೆ ಕಾಮಗಾರಿ ನಡೆಯುತ್ತಿರುವ ಕಾರಣ ವಿದ್ಯುತ್ ಕಟ್ ಮಾಡುತ್ತಿದ್ದೇವೆ, ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಬೇಕಾದರೆ ವಿದ್ಯುತ್ ಕಟ್ ಮಾಡಬೇಕಾಗುತ್ತದೆ, ಸಿಬ್ಬಂದಿಗಳ ಕೊರತೆ ಇದೆ, ಹಲವೆಡೆ ಟಿಸಿ ಅಳವಡಿಸಿದ್ದೇವೆ. ಎಲ್ಲವೂ ಶೀಘ್ರ ಸರಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷೆತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.ಅಧಿಕಾರಿಗಳು ಕೂಡ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಗ್ರಾಮ ಪಂಚಾಯಿತಿಯೊAದಿಗೆ ಸಹಕರಿಸಬೇಕೆಂದರು. ನಮ್ಮ ಅವಧಿ ಮುಕ್ತಾಯದ ಹಂತದಲ್ಲಿದೆ ನಮ್ಮ ಅವಧಿಯಲ್ಲಿ ಉತ್ತಮ ಕಾಮಗಾರಿಗಳು ನಡೆದಿವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿತ್ತು, ನಮ್ಮ ಗ್ರಾಮ ಪಂಚಾಯಿತಿ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬಂದಿದೆ ಅಧಿಕಾರಿಗಳು ಆದಷ್ಟು ಬೇಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಗಿಸಿ ನಮ್ಮ ಗ್ರಾಮ ಪಂಚಾಯಿತಿ ಉತ್ತಮ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಹಕರಿಸಿ ಗಾಂಧಿ ಪುರಸ್ಕಾರಕ್ಕೆ ನಮ್ಮ ಗ್ರಾಮ ಪಂಚಾಯಿತಿ ಆಯ್ಕೆ ಯಾಗುವಂತಾಗಲಿ ಎಂದರು. ಗ್ರಾಮಸ್ಥರು ವಿವಿಧ ಯೋಜನೆಗಳ, ಕಾಮಗಾರಿಗಳ, ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು.
ಆಯುಷ್ ಇಲಾಖೆಯ ಬಗ್ಗೆ ಅರಪಟ್ಟು ಸರ್ಕಾರಿ ಆಯುಷ್ ಆಸ್ಪತ್ರೆಯ ಡಾ.ಶುಭ,ಶಿಶು ಇಲಾಖೆಯ ಬಗ್ಗೆ ಸೀತಾಲಕ್ಷ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಗ್ಗೆ ಪವಿತ್ರ,ಕಂದಾಯ ಇಲಾಖೆ ಬಗ್ಗೆ ಸ್ವಾತಿ ಹಾಗೂ ಅಮೃತ, ಪಶು ಇಲಾಖೆಯ ಬಗ್ಗೆ ಡಾ.ನವೀನ್ ಕುಮಾರ್, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ರಾಜೇಶ್ ಹಾಗೂ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಇತರ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೆಬಾಸ್ಟಿನ್ ಪೆರೇರಾ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯಿತಿ ಸರ್ವತೋಮುಖ ಅಭಿವೃದ್ಧಿ ಹೊಂದಬೇಕಾದರೆ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಬೇಕು. ಕೈ ಜೋಡಿಸಿದರೆ ಗ್ರಾಮ ಪಂಚಾಯಿತಿ ಸಂಪೂರ್ಣ ಅಭಿವೃದ್ಧಿಯಾಗಲು ಸಾಧ್ಯ. ಇದಕ್ಕೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಸಹಕಾರ ಮುಖ್ಯ ಎಂದರು.
ಈ ಸಂದರ್ಭ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಶಿಶು ಅಭಿವೃದ್ದಿ ಅಧಿಕಾರಿ ಸೀತಾ ಲಕ್ಷಿö್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವಿನೋದ್ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರು,ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೆಬಾಸ್ಟಿನ್ ಪೆರೇರಾ ಸ್ವಾಗತಿಸಿ, ಸರ್ವರನ್ನು ವಂದಿಸಿದರು.