ಸೋಮವಾರಪೇಟೆ, ಡಿ.೧: ಕನ್ನಡ ನೆಲ, ಜಲ, ನಾಡು-ನುಡಿ ರಕ್ಷಣೆ ಪ್ರತಿಯೋರ್ವ ಕನ್ನಡಿಗನ ಕರ್ತವ್ಯ. ಈ ನಿಟ್ಟಿನಲ್ಲಿ ಕನ್ನಡಪರ ಸೇವೆಗಾಗಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಕರೆ ನೀಡಿದರು.
ಸಂಘಟನೆಯ ನಗರ ಘಟಕದ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ-ಸಮಾಜ ಸೇವಕರಿಗೆ ಸನ್ಮಾನ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿಯ ರಕ್ಷಣೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಅವಿರತ ಶ್ರಮಿಸುತ್ತಿದ್ದಾರೆ. ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅಂಶಗಳಿದ್ದು, ಇದನ್ನು ಅನುಷ್ಠಾನಕ್ಕೆ ತರುವಂತಹ ಕೆಲಸ ಸರ್ಕಾರಗಳಿಂದ ಆಗಬೇಕಿದೆ. ಕನ್ನಡಿಗರ ಹಿತ ಕಾಯುವುದರೊಂದಿಗೆ ಭಾಷೆ, ಕಲೆ, ಸಾಹಿತ್ಯವನ್ನೂ ಉಳಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ್ ಆಚಾರ್ಯ, ತಾಲೂಕು ಘಟಕದ ಅಧ್ಯಕ್ಷ ರೋಹಿತ್ ಗೌಡ, ತಾಲೂಕು ಯುವ ಘಟಕದ ಅಧ್ಯಕ್ಷ ಗಣೇಶ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಲತಾ ಬಜೆಗುಂಡಿ ಉಪಸ್ಥಿತರಿದ್ದರು. ಪೊಲೀಸ್ ಗುಪ್ತದಳ ವಿಬಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಎಂ. ಚಂಗಪ್ಪ, ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾ ಅಧ್ಯಕ್ಷ ದೀಪಕ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪುರುಷೋತ್ತಮ್, ಸಾಮಾಜ ಸೇವಕ ಸಿ.ಡಿ. ನೆಹರು ಅವರುಗಳನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು. ಇದರೊಂದಿಗೆ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗಾಯಕ ಪುರುಷೋತ್ತಮ್ ಅವರಿಂದ ಕನ್ನಡ ಗೀತೆಗಳ ಗಾಯನ ಮೂಡಿ ಬಂತು. ಸಂಘಟನೆಯ ಪದಾಧಿ ಕಾರಿ ಗಳಾದ ಅಬ್ಬಾಸ್ ಬಜೆಗುಂಡಿ, ರವೀಶ್ ಕಲ್ಕಂದೂರು, ಅಬ್ದುಲ್ ಸಲಾಂ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.