ಹೆಬ್ಬಾಲೆ, ನ. ೩೦ : ಹೆಬ್ಬಾಲೆ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದ ಶೌಚಾಲಯದ ಅವ್ಯವಸ್ಥೆ ಖಂಡಿಸಿ ಪಂಚಾಯಿತಿ ಕಚೇರಿ ಮುಂಭಾಗ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗ್ರಾ.ಪಂ. ಸುತ್ತಮುತ್ತ ಕಾಡು ದಟ್ಟವಾಗಿದೆ. ಕಟ್ಟಡಕ್ಕೆ ಸುಣ್ಣಬಣ್ಣ ಬಳಿದಿಲ್ಲ, ಸ್ವಚ್ಚತೆ ಮರೆತಿದ್ದಾರೆ, ದ್ವಜಸ್ಥಂಭ ಕೆಳಗೆ ಕಸದ ರಾಶಿ ತಾಂಡವವಾಡುತ್ತಿದ್ದು, ರಾಷ್ಟç ಧ್ವಜಕ್ಕೆ ಅಪಮಾನ ಮಾಡಲಾಗಿದೆ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಕರವೇ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ಇಒ, ಪಿಡಿಒ ಆಗಮಿಸಿ ಅಹವಾಲು ಸ್ವೀಕರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ, ಉಪಾಧ್ಯಕ್ಷೆ ಲತಾ, ಸದಸ್ಯ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಈ ಸಂದರ್ಭ ಅವ್ಯವಸ್ಥೆಗಳ ಬಗ್ಗೆ ಪ್ರತಿಭಟನಾಕಾರರು ಕಿಡಿಕಾರಿದರು. ಕೂಡಲೆ ಅವ್ಯವಸ್ಥೆಗಳನ್ನು ಸರಿಪಡಿಸಿ ಉತ್ತಮ ಸೇವೆ ಒದಗಿಸುವಂತೆ ಆಗ್ರಹಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ರಾಜಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸತೀಶ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ಶಿವ, ತಾಲೂಕು ಸಂಚಾಲಕ ರಂಗಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ ನಾಗರಾಜ್, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಜಯಶ್ರೀ ಮುರುಗೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಫ್ರಾನ್ಸಿಸ್ ಡಿಸೋಜ ಪ್ರಮುಖರಾದ ಸರಳ ರಾಮಣ್ಣ, ಜಯರಾಜ್ ಮತ್ತಿತರರು ಪಾಲ್ಗೊಂಡಿದ್ದರು.