ಬೆಂಗಳೂರು, ನ. ೩೦: ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನಾ ðಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ೨೦೨೪ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆ ಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸಕಲೇಶಪುರ ಭಾಗದಲ್ಲಿ ನೆಲೆಸಿದ್ದ ಅರೆಭಾಷಿಕರು ಬರಗಾಲದ ಸಂದರ್ಭದಲ್ಲಿ ಹೇಮಾವತಿ ನದಿ ಬತ್ತಿದಾಗ ಪಕ್ಕದ ಜಿಲ್ಲೆ ಸುಳ್ಯಕ್ಕೆ ಬಂದು ನೆಲೆಯೂರುತ್ತಾರೆ. ತುಳು, ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಹೋಗುತ್ತೇನೆ ಎನ್ನುವುದು ವೋನೆ, ಬರುತ್ತೇನೆ ಎನ್ನುವುದು ಬನ್ನೇ ಎಂದು ಹೇಳುತ್ತಾರೆ. ಹೀಗೆ ಕೆಲವು ಅಕ್ಷರಗಳು ಬಿಟ್ಟುಹೋಗಿ ಅರೆಭಾಷೆಯಾಗಿದೆ. ಮೂಲತಃ ಗೌಡ ಸಮುದಾಯಕ್ಕೆ ಸೇರಿರುವ ಇವರನ್ನು ಅರೆಭಾಷೆ ಗೌಡರು ಎನ್ನುತ್ತಾರೆ. ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿಯಾಗಿದೆ ಎಂದರು.
ಅರೆಭಾಷಿಕರಾಗಿದ್ದ ಕುರುಂಜಿ ವೆಂಕಟರಮಣ ಗೌಡರು ನನಗೆ ಪರಿಚಿತರು ಎಂದು ಸ್ಮರಿಸಿದ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ೨೩೦ ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ ಎಂದರು.
ರೂ. ೫೦ ಲಕ್ಷ - ಜಾಗದ ಭರವಸೆ
ಭಾಗಮಂಡಲದಲ್ಲಿ ನಾಡಗೌಡ ಸಮುದಾಯಕ್ಕೆ ಒಂದು ಕೋಟಿ ಹಣವನ್ನು ಹಿಂದೆ ಒದಗಿಸಲಾಗಿತ್ತು. ಪ್ರಸ್ತುತ ರೂ. ೫೦ ಲಕ್ಷ ಬೇಡಿಕೆಯನ್ನು ಈಡೇರಿಸ ಲಾಗುವುದು. ಇತರೆ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಾಗ ನೀಡಬೇಕೆನ್ನುವ ಪ್ರಸ್ತಾವನೆ ಇದ್ದು, ಇದನ್ನು ಈಡೇರಿಸಲಾಗುವುದು ಎಂದು ಭರವಸೆಯಿತ್ತರು.
ಉಸಿರಿರುವ ತನಕ ಜೊತೆಗಿರುವೆ -
ಡಿ.ಕೆ. ಶಿವಕುಮಾರ್
ಕೊನೆ ಉಸಿರು ಇರುವ ತನಕ ಅರೆಭಾಷೆ ಸಮು ದಾಯದ ಜೊತೆಗೆ ನಿಂತಿರುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಅಕ್ಷರ ಮರೆತರೆ ಕಲಿಸಬಹುದು, ಸಂಸ್ಕೃತಿ ಮರೆತರೆ ಕಲಿಸಲಾಗುವುದಿಲ್ಲ. ೪ಐದನೇ ಪುಟಕ್ಕೆ (ಮೊದಲ ಪುಟದಿಂದ)
ಭಾರತದ ಆಸ್ತಿಯೇ ಸಂಸ್ಕೃತಿಯಾಗಿದೆ. ಭಾರತದಲ್ಲಿ ಬೇಕಾದಷ್ಟು ಭಾಷೆಗಳಿವೆ. ೭ ಸಾವಿರದಿಂದ ೨೮೦೦ಕ್ಕೆ ಭಾಷೆಗಳು ಕ್ಷೀಣಿಸಿವೆ. ಮೈಸೂರು, ಕೊಡಗು, ಗುಲ್ಬರ್ಗ, ಕನಕಪುರ ಕನ್ನಡವೇ ಬೇರೆ ಆದರೆ, ೨೨೪ ಜನರೂ ನಾವು ವಿಧಾನಸೌಧದಲ್ಲಿ ಒಂದೇ ಭಾಷೆ ಮಾತನಾಡುತ್ತೇವೆ ಎಂದ ಅವರು, ಸಮುದಾಯ ಭವನಕ್ಕೆ ಜಮೀನು ಬೇಕು ಎಂದು ಮಡಿಕೇರಿ ಶಾಸಕ ಮಂತÀರ್ ಗೌಡ ಹೇಳಿದ್ದಾರೆ. ಅದನ್ನು ಈಡೇರಿಸಲಾಗುವುದು. ನನಗೆ ಮುಂದಿನ ಬಾರಿ ನಿಮ್ಮ ಸಂಪ್ರದಾಯಿಕ ಊಟ ಹಾಕಿಸಿ ಎಂದು ಮನವಿ ಮಾಡಿದರು.
ಅರೆಭಾಷೆಯಲ್ಲಿ ಪೊನ್ನಣ್ಣ ಮಾತು
ಭಾಷಣದ ಆರಂಭದಲ್ಲಿ ಅರೆಭಾಷೆಯಲ್ಲಿಯೇ ಮಾತನಾಡುವ ಮೂಲಕ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಗಮನ ಸೆಳೆದರು.
ಕಳೆದ ಸಭೆಯಲ್ಲಿ ಅರೆಭಾಷೆ ಕಲಿತು ಮಾತನಾಡುತ್ತೇನೆ ಎಂದಿದ್ದೆ. ಆದರೆ, ಕಲಿಕೆ ಸಾಧ್ಯವಾಗಲಿಲ್ಲ. ಹಾಗಾಗಿ ಬರೆದು ಓದುತ್ತಿದ್ದೇನೆ ಎಂದ ಪೊನ್ನಣ್ಣ ಅವರು, ಅರೆಭಾಷೆ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿರುವುದು ಹೆಮ್ಮೆ ತಂದಿದೆ.
ಅರೆಭಾಷೆ ಸಮುದಾಯಕ್ಕೆ ತನ್ನದೇ ಆದ ವಿಶೇಷತೆಯಿದೆ. ಎಲ್ಲಾ ಜನಾಂಗವನ್ನು ಒಳಗೊಂಡರೆ ಮಾತ್ರ ಒಂದು ಜಿಲ್ಲೆ, ರಾಜ್ಯವಾಗುತ್ತದೆ. ಅಪಾರ ಕೊಡುಗೆಯನ್ನು ದೇಶ ಹಾಗೂ ರಾಜ್ಯಕ್ಕೆ ಅರೆಭಾಷೆ ಸಮುದಾಯ ನೀಡಿದೆ. ಸಮುದಾಯದ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಮೂವರಿಗೆ ಪ್ರಶಸ್ತಿ ಪ್ರದಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೪ನೇ ಸಾಲಿನ ಅರಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
ಅರಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಗೆ ಕೆ.ಆರ್. ಗಂಗಾಧರ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ಸೇವೆ ಪರಿಗಣಿಸಿ ಡಾ. ಯು.ಪಿ. ಶಿವಾನಂದ, ಅರೆಭಾಷೆ ಸಂಘಟನೆ ಮತ್ತು ಆಡಳಿತ ಸೇವೆಗೆ ಡಿ.ಎಸ್.ಆನಂದ್ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಚಿವ ಭೈರತಿ ಸುರೇಶ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಉಪಸ್ಥಿತರಿದ್ದರು.