ಮುಳ್ಳೂರು, ನ. ೩೦: ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕ ಮತ್ತು ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಾಷೆ, ಸಾಹಿತ್ಯ, ನಾಡು ನುಡಿ, ಕೊಡಗು ಜಿಲ್ಲೆಯ ಬಗ್ಗೆ ಕುರಿತಾದ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷೆ ಮತ್ತು ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಯಲ್ಲಿ ಹೆಮ್ಮೆಪಟ್ಟುಕೊಳ್ಳಬೇಕು. ಕರ್ನಾಟಕದ ೮ ಮಂದಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ಕರ್ನಾಟಕ ದೇಶದಲ್ಲಿ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಕನ್ನಡ ರಾಜ್ಯೋತ್ಸವದ ಅಂಗವಗಿ ಪ್ರತಿವರ್ಷ ಜಾನಪದ ಪರಿಷತ್ ಮತ್ತು ಸುಪ್ರಜ ಗುರುಕುಲ ಶಾಲೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಘಟಕದ ಸದಸ್ಯ ಮತ್ತು ಪತ್ರಕರ್ತ ಭಾಸ್ಕರ್ ಮುಳ್ಳೂರು, ಶಾಲಾ ಶಿಕ್ಷಕರು ಹಾಜರಿದ್ದರು. ವಿವಿಧ ಶಾಲಾ ಮಕ್ಕಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.