ಸುಂಟಿಕೊಪ್ಪ, ನ. ೩೦: ಕಸದ ರಾಶಿ ವಿಲೇವಾರಿ, ಹದಗೆಟ್ಟ ರಸ್ತೆಗಳು, ಉರಿಯದ ವಿದ್ಯುತ್ ದೀಪಗಳು ಕುಡಿಯುವ ನೀರಿನ ಸಮಸ್ಯೆ, ಕ್ರೀಡಾಂಗಣ ಮತ್ತು ಸಭಾಂಗಣದ ಕೊರತೆ, ಅಡ್ಡಾದಿಡ್ಡಿ ಪಾರ್ಕಿಂಗ್ ಸೇರಿದಂತೆ ಆನೇಕ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ೭ ವಾರ್ಡ್ಗಳ ನ್ನೊಳಗೊಂಡ ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಿತು.

ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಮಕ್ಕಳು ಸರಕಾರಿ ಶಾಲಾವರಣ ಪುಂಡಪೋಕರಿಗಳ ಹಾವಳಿಯಿಂದ ಕೂಡಿದ್ದು ಕಿಟಕಿ ಬಾಗಿಲುಗಳನ್ನು ಮುರಿಯುವುದು ಹೆಂಚುಗಳನ್ನು ಒಡೆದುಹಾಕುತ್ತಿದ್ದು ಅತ್ಯಂತ ಶೀಘ್ರದಲ್ಲಿ ಸಿಸಿ ಕ್ಯಾಮರಗಳನ್ನು ದುರಸ್ತಿ ಪಡಿಸಲು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ ಶಾಲಾ ಮೂಲಸೌಕರ್ಯದ ಕುರಿತು ನಮಗೆ ಆರಿವಿದೆ. ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಭರವಸೆ ನೀಡಿದರು.

ಗದ್ದೆಹಳ್ಳ ಸಂಯುಕ್ತ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಡಿ. ೧ ರಿಂದ ವಸತಿ ನಿಲಯ ಪುನಾರಂಭಗೊಳ್ಳಲಿದ್ದು, ನೂತನ ಟ್ಯಾಂಕ್ ಕಾರ್ಯಾರಂಭ ಮಾಡುವವರೆಗೆ ಹಾಸ್ಟೆಲ್ ನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು. ಅಕ್ಷರ ದಾಸೋಹ ಕೊಠಡಿಯ ಬಾಗಿಲು ಮುರಿದು ಹೋಗಿದೆ ಇದರಿಂದ ನಾಯಿ, ಬೆಕ್ಕುಗಳು ಅಕ್ಷರ ದಾಸೋಹ ಆಹಾರ ಸಾಮಗ್ರಿಗಳನ್ನು ಹಾಳುಗೆಡುತ್ತಿವೆ. ಸಂಜೆಯ ವೇಳೆ ಕಿಡಿಗೇಡಿ ಪುಂಡ ಪೋಕರಿಗಳು ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆ, ಮದ್ಯ, ಧೂಮಪಾನ ಸೇವಿಸಿ ಅಶುಚಿತ್ವಗೊಳಿಸುತ್ತಿದ್ದಾರೆ, ಶಾಲೆಯ ಶೌಚಾಲಯದ ಗುಂಡಿ ತೆರೆದುಕೊಂಡಿದ್ದು ಅಪಾಯ ಸಂಭವಿಸುವ ಮುಂಚಿತವಾಗಿ ಮುಚ್ಚುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುನಿಲ್‌ಕುಮಾರ್ ಈ ಎಲ್ಲಾ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು. ಗ್ರಾಮಸಭೆಗೆ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿಗಳು ಕಾರ್ಯಚರಿಸುತ್ತಿದ್ದು ಅವುಗಳ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರ ಬೇಡಿಕೆಗಳ ಅನುಗುಣವಾಗಿ ಪರಿಗಣಿಸಿ ಅವುಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸಿ ಕಾರ್ಯ ವೈಖರಿಯನ್ನು ನಡೆಸಲಾಗುತ್ತದೆ. ಅದರಂತೆ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸುವ ಮಕ್ಕಳ ಹಕ್ಕುಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಕ್ಕಳ ಗ್ರಾಮಸಭೆ ಆಯೋಜಿಸಲಾಗಿದೆ ಎಂದರು.

ವಿದ್ಯಾರ್ಥಿಗಳಾದ ಉದಯಕುಮಾರ್, ಸಿಂಚನ, ಸುಧಾ, ವಿಷ್ಣು, ಇರ್ಫಾನ್, ರಶೀದ್, ರಮೀಜ ಫಾತೀಮಾ, ಗ್ರೀಷ್ಮ, ಕೃತಿಕ, ಸಹನಾ ಫಾತೀವi ಮುಂತಾದವರು ಸಮಸ್ಯೆ ಸಭೆಯಲ್ಲಿ ಹೇಳುವ ಮೂಲಕ ಗಮನಸೆಳೆದರು. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜೀವನ್ ವಹಿಸಿದ್ದರು. ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಹಿಳಾ ಮುಖ್ಯ ಪೇದೆ ಎಂ.ಬಿ. ಸುಮತಿ ಮಕ್ಕಳ ರಕ್ಷಣೆ ಮತ್ತು ಕಾನೂನು ಬಗ್ಗೆ ಮಾಹಿತಿಯನ್ನು ನೀಡಿದರು.

ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ವಸಂತಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಈಶ, ಪ್ರೌಢಶಾಲಾ ಶಿಕ್ಷಕಿ ಜಯಶ್ರೀ, ಪ್ರಕಾಶ್, ಶಾಲಾ ಶಿಕ್ಷಕರುಗಳಾದ ಮಂಜುನಾಥ್, ಸೌಭಾಗ್ಯ, ಸತೀಶ್, ರೂಪಕಲಾ, ಪಂಚಾಯಿತಿ ಲೆಕ್ಕಪರಿಶೋಧಕಿ ಚಂದ್ರಕಲಾ, ಸಿಬ್ಬಂದಿಗಳಾದ ಸಂದ್ಯಾ, ಮಂಜುನಾಥ್, ಶ್ರೀನಿವಾಸ್ ಮತ್ತಿತರರು ಇದ್ದರು.