ಮಡಿಕೇರಿ, ನ. ೨೯: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಳೆದ ಮೂರು ದಿನಗಳಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿತ್ತು.

ದಿನದ ೨೪ ಗಂಟೆಗಳ ಕಾಲ ಸಮಾಜಕ್ಕಾಗಿ ದುಡಿಯುವ ಪೊಲೀಸರು ಕುಟುಂಬ ಸಹಿತ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ಓಡಿ, ಆಡಿ ಬಹುಮಾನ ಗೆದ್ದು ಸಂತಸ ಹಂಚಿಕೊAಡರು.

ಮೂರು ದಿನಗಳ ಕಾಲ ವಿವಿಧ ಹಂತಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಇಂದು ಸಂಜೆ ಅಂತಿಮ ಹಂತದ ಪೈಪೋಟಿ ನಡೆಯಿತು. ನೂರು ಮೀ. ಪುರುಷರ ವಿಭಾಗದಲ್ಲಿ ವೀರಾಜಪೇಟೆಯ ಧರ್ಮ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಡಿಕೇರಿಯ ಸಂಜು ದ್ವಿತೀಯ, ಡಿಎಅರ್ ನ ಉದಯ್ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಮಡಿಕೇರಿಯ ಭವ್ಯ ಚಾಂಪಿಯನ್ ಆದರೆ, ಮಡಿಕೇರಿ ವಿಶೇಷ ಘಟಕದ ರೇಣುಕ ದ್ವಿತೀಯ, ಶಶಿಕಲಾ ತೃತೀಯ ಸ್ಥಾನ ಗಳಿಸಿದರು. ರಿಲೇ ವಿಭಾಗದಲ್ಲಿ ಮಡಿಕೇರಿ ವಿಶೇಷ ಘಟಕ ಪ್ರಥಮ, ಡಿಎಆರ್ ದ್ವಿತೀಯ ಸ್ಥಾನ ಗಳಿಸಿದವು. ಐದು ಕಿ.ಮೀ. ಪುರುಷರ ಮ್ಯಾರಥಾನ್‌ನಲ್ಲಿ ಸೋಮವಾರಪೇಟೆಯ ಶಶಿಕುಮಾರ್ ಪ್ರಥಮ, ಡಿಎಆರ್ ದ್ವಿತೀಯ, ಹಾಗೂ ಡಿಎಆರ್ ನ ಚಂದ್ರಗುಪ್ತ ತೃತೀಯ ಸ್ಥಾನ ಗಳಿಸಿದರು.

ರೋಚಕತೆಯಿಂದ ಕೂಡಿದ್ದ ಹಗ್ಗ ಜಗ್ಗಾಟ ಪ್ರೇಕ್ಷಕರನ್ನು ತುದಿ ಕಾಲಿನಲ್ಲಿ ನಿಲ್ಲುವಂತೆ ಮಾಡಿತು. ಪೊಲೀಸ್ ಹಿರಿಯ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳು, ಕುಟುಂಬದವರು ಹುರಿದುಂಬಿಸುತ್ತಿದ್ದುದು ಕಂಡು ಬಂತು. ಪುರುಷರ ವಿಭಾಗದಲ್ಲಿ ಸೋಮವಾರಪೇಟೆ ಉಪವಿಭಾಗ ಜಯಶಾಲಿಯಾದರೆ, ಡಿಎಆರ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ವಿಶೇಷ ಘಟಕ ಜಯಶಾಲಿಯಾದರೆ, ಮಡಿಕೇರಿ ಉಪವಿಭಾಗ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮನರಂಜನೆ

ಕ್ರೀಡಾಹಬ್ಬದಲ್ಲಿ ಕೇವಲ ಕ್ರೀಡೆ ಮಾತ್ರವಲ್ಲದೆ ಮನರಂಜನೆ ಕೂಡ ಮನೆ ಮಾಡಿತ್ತು. ಪೊಲೀಸ್ ಅಧಿಕಾರಿಗಳಾದಿಯಾಗಿ ಸಿಬ್ಬಂದಿಗಳು ವಿವಿಧ ವೇಶ ತೊಟ್ಟು ಪ್ರೇಕ್ಷಕರನ್ನು ರಂಜಿಸಿದರು. ಯಮರಾಜ, ಗೊಂಬೆಗಳ ವೇಷ ತೊಟ್ಟು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವ ಮೂಲಕ ಗಮನ ಸೆಳೆದರು. ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಮಡಿಕೇರಿ ಗ್ರಾಮಾಂತರ ವಿಭಾಗ ನಿರೀಕ್ಷಕ ಚಂದ್ರಶೇಖರ್ ಅವರುಗಳು ಗೊಂಬೆ ವೇಶಧಾರಿಗಳಾಗಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಾ., ಮಕ್ಕಳಿಗೆ ಮಿಠಾಯಿಗಳನ್ನು ನೀಡಿ ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದರು.

ಬಹುಮಾನ ವಿತರಣೆ, ಸಮಾರೋಪ ಸಮಾರಂಭದ ಬಳಿಕ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. ಭಾಗವಹಿಸಿದ್ದ ಸರ್ವರಿಗೂ ಸಹಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.