ಕಣಿವೆ, ನ. ೨೯: ಹನ್ನೆರಡನೇ ಶತಮಾನದ ವಚನಕಾರರು ರಚಿಸಿದ ವಚನಗಳಲ್ಲಿ ಮನುಷ್ಯನ ಬದುಕನ್ನು ಸುಂದರ ಗೊಳಿಸುವ ಜೀವನ ಮೌಲ್ಯಗಳು ಅಡಕವಾಗಿದ್ದು ಅವುಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿತ್ವವನ್ನು ಹೊಳಪು ಮಾಡಿಕೊಳ್ಳಿ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಗಮಕ ಕಲಾ ವಿದ್ವಾನ್ ಎಸ್.ಜಿ. ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆಗಳು’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಠ್ಯಗಳ ಜೊತೆಯಲ್ಲಿ ನೈತಿಕ ಪ್ರಜ್ಞೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಶರಣರ ವಚನಗಳನ್ನು ಅರಿತರೆ ಬದುಕು ಸಾರ್ಥಕವಾಗುತ್ತದೆ.

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಶ್ರೀಮಂತಗೊಳಿಸಿದ ವಚನಸಾಹಿತ್ಯ ಈ ನೆಲ ಮೂಲ ಸಂಸ್ಕೃತಿಯ ತಾಯಿ ಬೇರು ಎಂದು ವ್ಯಾಖ್ಯಾನಿಸಿದರು. ಯಾರಿಗೂ ನೋವಾಗದಂತೆ ಎಲ್ಲರ ಮನವನ್ನು ಅರಳಿಸುವಂತಹ ಮಾತು ಜ್ಯೋತಿರ್ಲಿಂಗ ದಂತಿರಬೇಕು. ಅದು ಮುತ್ತಿನ ಹಾರದಂತಿರಬೇಕು ಎಂದು ವಚನಗಳ ಮೂಲಕ ಶರಣರ ವಿಚಾರಧಾರೆಗಳನ್ನು ಅವರು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಪರಶಿವಮೂರ್ತಿ ಮಾತನಾಡಿ, ಸಮಾಜದ ಅಂಕು ಡೊಂಕು ತಿದ್ದುವ ಮೂಲಕ ಸಮ ಸಮಾಜದ ಕನಸನ್ನು ನನಸು ಮಾಡಿದ ವಚನ ಸಾಹಿತ್ಯ ವಿದ್ಯಾರ್ಥಿಗಳ ಪಾಲಿಗೆ ಭಗವದ್ಗೀತೆಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧ್ಯಯನ ಶೀಲರಾಗಬೇಕು ಎಂದರು.

ತುಮಕೂರಿನ ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜ ಸುಧಾರಕರು ಹಾಗೂ ವಚನಕಾರರ ಬದುಕು ಆದರ್ಶವಾಗಬೇಕು. ವಿದ್ಯಾರ್ಥಿಗಳು ಉಜ್ವಲ ಜೀವನದ ಕನಸು ಬಿತ್ತಬೇಕು. ಯೋಜನೆಗಳು ಮತ್ತು ನವ ನವೀನ ಯೋಚನೆಗಳ ಮೂಲಕ ನಿರಂತರವಾದ ಶ್ರಮದೊಂದಿಗೆ ಶಿಸ್ತು ಸಂಯಮ ಹಾಗೂ ಸಮಯ ಪಾಲನೆ ರೂಢಿಸಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದರು.

ತುಮಕೂರಿನ ಸರಿಗಮಪ ಹಾಸ್ಯ ಕಲಾವಿದ ಮಿಮಿಕ್ರಿ ಈಶ್ವರಯ್ಯ ಅವರಿಂದ ಇದೇ ಸಂದರ್ಭ ಮಿಮಿಕ್ರಿ ಪ್ರದರ್ಶನ ನಡೆಯಿತು.

ತುಮಕೂರಿನ ಜಾನಪದ ಹಾಡುಗಾರ್ತಿ ಪ್ರೇಮ ಕುಮಾರಸ್ವಾಮಿ ಜಾನಪದ ಗಾಯನ ಮೂಲಕ ಮಕ್ಕಳ ಮನ ಸೆಳೆದರು. ಶಾಲೆಯ ಸಂಗೀತಾ ಶಿಕ್ಷಕ ಪುಟ್ಟರಾಜು ಅವರಿಂದ ವಚನಗಾಯನ ನಡೆಯಿತು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಶಾಲಾ ಪ್ರಾಂಶುಪಾಲೆ ಶ್ರೀಲಕ್ಷಿö್ಮ, ಶಿಕ್ಷಕರಾದ ಶಬರಿಗಿರೀಶ್, ಜಗದೀಶ್ ಹಾಗೂ ಶಾಲಾ ಸಮಿತಿ ಸದಸ್ಯ ಪ್ರಮೋದ್ ಇದ್ದರು.