ಕಣಿವೆ, ನ. ೨೯: ಹಾರಂಗಿ ಹಿನ್ನೀರಿನಲ್ಲಿ ಸಂಭವಿಸುವ ಸಾವಿನ ಪ್ರಕರಣಗಳನ್ನು ತಡೆಯುವ ಸಂಬAಧ ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾಮ ಪಂಚಾಯಿತಿ ವತಿಯಿಂದಲೇ ಹಾರಂಗಿ ಹಿನ್ನೀರು ಪ್ರದೇಶವನ್ನು ನಿರ್ವಹಿಸುವ ಮೂಲಕ ಪಂಚಾಯಿತಿಗೆ ಆದಾಯದ ಮೂಲ ಕಂಡುಕೊಳ್ಳುವ ಬಗ್ಗೆ ನಾಕೂರು ಶಿರಂಗಾಲ ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಕೂರು ಶಿರಂಗಾಲ ಗ್ರಾಮದ ಕಾಫಿ ಬೆಳೆಗಾರ ಮಾಚಯ್ಯ ಅವರು, ಕಳೆದ ಕೆಲವು ದಿನಗಳ ಹಿಂದಷ್ಟೆ ಮಡಿಕೇರಿ ಮೂಲದ ಇಬ್ಬರು ವಿದ್ಯಾರ್ಥಿಗಳು ಹಾರಂಗಿ ಹಿನ್ನೀರಿಗೆ ಬಂದು ನೀರಲ್ಲಿ ಮುಳುಗಿ ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿ, ಹಾರಂಗಿ ಹಿನ್ನೀರಿಗೆ ಸಾರ್ವಜನಿಕರು ಅಥವಾ ಪ್ರವಾಸಿಗರು ಯಾರೂ ಕೂಡ ಪ್ರವೇಶವಿಲ್ಲದಂತೆ ಕಟ್ಟು ನಿಟ್ಟಿನ ಕ್ರಮ ವಾಗಬೇಕಿದೆ.
ಇಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಗೊಳಿಸದಂತೆ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜೀವಗಳನ್ನು ಉಳಿಸುವ ಕೆಲಸವಾಗಬೇಕಿದೆ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದಾಗ, ಪಂಚಾಯಿತಿಯ ಅಧ್ಯಕ್ಷರಾದ ಜಗನ್ನಾಥ್ ಅವರೇ ಈ ವಿಚಾರಕ್ಕೆ ಧ್ವನಿಗೂಡಿಸಿದರು. ಸ್ಥಳೀಯರು ನಾವೆಲ್ಲಾ ಏನೆಲ್ಲಾ ಕ್ರಮಗಳನ್ನು ಕೈಗೊಂಡರೂ ಕೂಡ ಇಲ್ಲಿಗೆ ದೂರದಿಂದ ಬರುವ ಪ್ರವಾಸಿಗರು ಮದ್ಯಪಾನ ಮಾಡಿ, ಗಾಂಜಾ ಸೇವಿಸಿ ಹುಚ್ಚಾಟ ಆಡುತ್ತಿದ್ದಾರೆ. ಸಾವು ನೋವುಗಳನ್ನು ನಿಗ್ರಹಿಸಲು ಗ್ರಾಮ ಪಂಚಾಯಿತಿ ವತಿಯಿಂದಲೇ ಕಟ್ಟು ನಿಟ್ಟಿನ ಕ್ರಮ ವಾಗಬೇಕು.
ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಹಮ್ಮಿಕೊಂಡು ಪಂಚಾಯಿತಿಗೆ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಜಗನ್ನಾಥ್ ಸಲಹೆ ನೀಡಿದರು.
ಕೊಡಗು ಗುಡ್ಡ ಗಾಡು ಪ್ರದೇಶವಾದ್ದರಿಂದ ಸಂಚಾರಕ್ಕೆ ಸಹಜವಾಗಿ ಬಹುತೇಕರು ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಪಡಿತರ ವಿತರಿಸುವ ವಿಚಾರದಲ್ಲಿ ಕಾನೂನು ಸಡಿಲಿಕೆ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗುಂಡಿ ಬಿದ್ದಿರುವ ನಾಕೂರು ಶಿರಂಗಾಲ ಸಂಪರ್ಕ ರಸ್ತೆಗಳನ್ನು ಸರಿಪಡಿಸಿ. ಗ್ರಾಮದ ಕೆರೆಯ ಕೋಡಿಯನ್ನು ಸರಿಪಡಿಸಿ ಎಂದು ನಿವಾಸಿ ರಾಮಯ್ಯ ಆಗ್ರಹಿಸಿದರು.
ನೋಡಲ್ ಅಧಿಕಾರಿಯಾಗಿ ಕಾನ್ಬೈಲ್ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಮೂರ್ತಿ ಕಾರ್ಯ ನಿರ್ವಹಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಬಿ.ಇ.ಸತೀಶ್, ಸದಸ್ಯರಾದ ರಾಧಾಮಣಿ, ಪ್ರೇಮ, ಸುಭಾಶ್, ರಮೇಶ್, ಪಿಡಿಒ ಆಸ್ಮಾ ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.