ವೀರಾಜಪೇಟೆ, ನ. ೨೯: ವೀರಾಜಪೇಟೆ ನಗರದಲ್ಲಿ ವೀರಾಜಪೇಟೆ-ಪೊನ್ನಂಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಾರ್ಮಾಡು ಸುಬ್ರಮಣ್ಯ (ಸುಬ್ಬಣ್ಣ) ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲವು ಗ್ರಾಮಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಮಗ್ಗುಲ ಗ್ರಾಮದಿಂದ ಹಿರಿಯ ವಕೀಲರಾದ ವಿ.ಪಿ ರಮೇಶ್ ಅವರನ್ನು ನಿರ್ದೇಶಕ ಮತ್ತು ಕಾನೂನು ಸಲಹೆಗಾರರಾಗಿ, ಹಾಗೂ ಮೈತಾಡಿ ಗ್ರಾಮದಿಂದ ಯುವ ವೇದಿಕೆಯ ಮಾಜಿ ಅಧ್ಯಕ್ಷ ವಿ.ಪಿ ಲೋಹಿತ್ ಗೌಡ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಯಿತು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೊಟ್ಟೆಕೊಪ್ಪ ಗ್ರಾಮದ ವಿ.ಎಲ್. ಸುರೇಶ್ ಮಾತನಾಡಿ, ಸಂಘವು ಇನ್ನು ಮುಂದೆ ಸಕ್ರಿಯವಾಗಿ ನಡೆಯುವಂತೆ ಎಲ್ಲಾ ರೀತಿಯಲ್ಲಿ ಆಡಿಟ್ ಮತ್ತು ರಿನಿವಲ್ ಆಗಿದ್ದು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಅಧ್ಯಕ್ಷ ಸುಬ್ಬಣ್ಣ ಮಾತನಾಡಿ ಸಂಘವು ಹಲವು ತೊಡಕುಗಳನ್ನು ನಿವಾರಿಸಿಕೊಂಡು ಸಾಗುತ್ತಿದೆ. ಮುಂದೆ ಕೂಡ ಆಡಳಿತ ಮಂಡಳಿಯ ಎಲ್ಲರ ವಿಶ್ವಾಸದೊಂದಿಗೆ, ಸಮುದಾಯದ ಹಿರಿಯರು, ಮುಖಂಡರು ಸ್ವಾಮೀಜಿಗಳೊಂದಿಗೆ ಚರ್ಚಿಸಿ ಜನಪರ ಸೇವೆ ಮಾಡಲು ಪ್ರವೃತ್ತರಾಗುತ್ತೇವೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಣ್ಣಂಗಾಲ ಗ್ರಾಮದ ಕೆ.ಪಿ. ನಾಗರಾಜು, ಕೋತೂರಿನ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ಕೈಕೇರಿಯ ವಿ.ಪಿ. ರಾಜ, ಹಾತೂರಿನ ಹೆಚ್.ಎ. ಗಣೇಶ್, ಕೋತೂರಿನ ಬಸವರಾಜ್ ಮತ್ತು ನಿರ್ದೇಶಕಿ ಪದ್ಮ ಅವರು ಉಪಸ್ಥಿತರಿದ್ದರು.