ಚಂದ್ರಮೋಹನ್ ಎಂ.ಎನ್
ಕುಶಾಲನಗರ, ನ. ೨೯: ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಡಿಸೆಂಬರ್ ೧ ರಿಂದ ಎರಡು ದಿನಗಳ ಕಾಲ ಅದ್ದೂರಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಹನುಮ ಜಯಂತಿ ಮಂಟಪ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಅದ್ದೂರಿ ೭ ನೇ ವರ್ಷದ ಹನುಮಂತೋತ್ಸವ ಶೋಭಾಯಾತ್ರೆ ಡಿಸೆಂಬರ್ ೨ ರಂದು ನಡೆಯಲಿದೆ.
ಶೋಭಾಯಾತ್ರೆಯಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ೮ ಮಂಟಪಗಳು ಮೆರವಣಿಗೆಯಲ್ಲಿ ಬಂದು ಕುಶಾಲನಗರದ ಗಣಪತಿ ದೇವಾಲಯ ಬಳಿ ಸೇರಲಿದೆ. ಗುಡ್ಡೆಹೊಸೂರು, ಮಾದಾಪಟ್ಟಣ ಹಾರಂಗಿ, ಕೂಡಿಗೆ ಮಾರ್ಗಗಳಿಂದ ಶೋಭಾಯಾತ್ರೆಯ ಮಂಟಪಗಳು ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯುತ್ ಅಲಂಕೃತ ಮಂಟಪಗಳು ಕುಶಾಲನಗರ ಪಟ್ಟಣದ ಕಡೆಗೆ ಸಾಗಲಿವೆ. ಡಿಸೆಂಬರ್ ೨ ರಂದು ಸಂಜೆ ೭ ಗಂಟೆಯಿAದ ರಾತ್ರಿ ೧೨ ಗಂಟೆ ತನಕ ಮಂಟಪಗಳು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರದರ್ಶನ ನೀಡಲಿವೆ.
ಮಡಿಕೇರಿ ದಸರಾ ಉತ್ಸವಕ್ಕೆ ಪೈಪೋಟಿ ನೀಡುವಂತೆ ಈ ಮಂಟಪಗಳನ್ನು ಆಯೋಜಕರು ನಿರ್ಮಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಒಂದು ಮಂಟಪಕ್ಕೆ ಇನ್ನೊಂದು ಮಂಟಪ ಪೈಪೋಟಿ ರೀತಿಯಲ್ಲಿ ಆಯೋಜಕರು ಮಂಟಪವನ್ನು ತಯಾರಿ ಮಾಡುತ್ತಿದ್ದು, ಈ ಸಂಬAಧ ಈಗಾಗಲೇ ಹಲವು ಬಾರಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗಿದೆ.
ಹನುಮ ಜಯಂತಿಯನ್ನು ವಿಜೃಂಭಣೆಯಿAದ ನಡೆಸಬೇಕು. ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬAಧ ಮಂಟಪ ಸಮಿತಿ ಪದಾಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದಾರೆ.
ಹನುಮ ಜಯಂತಿ ಅಂಗವಾಗಿ ಕುಶಾಲನಗರ ರಾಮಾಂಜನೇಯ ಉತ್ಸವ ಸಮಿತಿ ಮತ್ತು ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ೪೦ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ೧ ಮತ್ತು ೨ ರಂದು ನಡೆಯಲಿದೆ.
ಕುಶಾಲನಗರ ರಥ ಬೀದಿಯ ಶ್ರೀ ಆಂಜನೇಯ ದೇವಾಲಯದಲ್ಲಿ ೧ ರಂದು ಬೆಳಗ್ಗೆ ಪವಮಾನ ಹೋಮ ನಡೆಯುವುದು. ೨ರಂದು ಬೆಳಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ ನಂತರ ಒಂದು ಗಂಟೆಗೆ ಅನ್ನ ಸಂತರ್ಪಣೆ ಇರುತ್ತದೆ ಎಂದು ದೇವಾಲಯ ಸಮಿತಿ ಮೂಲಗಳು ತಿಳಿಸಿವೆ. ಹನುಮಂತೋತ್ಸವ ಅಂಗವಾಗಿ ಆಂಜನೇಯ ದೇವಾಲಯದಿಂದ ಸಂಜೆ ಅಲಂಕೃತ ಮಂಟಪದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಆಂಜನೇಯ ದೇವಾಲಯ ಪ್ರಧಾನ ಅರ್ಚಕರಾದ ಡಾ. ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಲಿವೆ.
ಹನುಮ ಜಯಂತಿ ಮಂಟಪ ಸಮಿತಿ ಅಧ್ಯಕ್ಷರಾಗಿ ಎಂ.ಡಿ. ಕೃಷ್ಣಪ್ಪ ಅವರು ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಏಳನೇ ವರ್ಷದ ಅದ್ದೂರಿ ಹನುಮ ಜಯಂತೋತ್ಸವ ಶೋಭಾಯಾತ್ರೆ ನಡೆಯಲಿದೆ. ಡಿಸೆಂಬರ್ ೨ ರಂದು ಸಂಜೆ ೬ ಗಂಟೆಗೆ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಉತ್ಸವ ಮೂರ್ತಿ ಗಣಪತಿ ದೇವಾಲಯ ಬಳಿ ಬಂದು ಮಾರಿಯಮ್ಮ ದೇವಾಲಯ ತನಕ ತೆರಳಿ ನಂತರ ಅದೇ ಮಾರ್ಗವಾಗಿ ಹಿಂತಿರುಗಲಿದೆ.
ಹೆಚ್ಆರ್ಪಿ ಕಾಲೋನಿಯ ಶ್ರೀರಾಮ ಮಂದಿರದ ಅಂಜನಿ ಪುತ್ರ ಜಯಂತೋತ್ಸವ ಸಮಿತಿ, ಬೈಚನಹಳ್ಳಿಯ ಗೆಳೆಯರ ಬಳಗ, ಕುಶಾಲನಗರ ಗೋಪಾಲ ಸರ್ಕಲ್ ಕೇಸರಿ ಟೀಂ, ಮಾದಪಟ್ಟಣದ ಶ್ರೀರಾಮದೂತ ಜಯಂತಿ ಆಚರಣೆ ಸಮಿತಿ, ಗುಡ್ಡೆಹೊಸೂರಿನ ವೀರಾಂಜನೇಯ ಸೇವಾ ಸಮಿತಿ, ಇಂದಿರಾ ಬಡಾವಣೆಯ ಟೀಮ್ ಮಹಾವೀರ ಹನುಮಾನ್ ಸೇವಾ ಸಮಿತಿ, ಕೂಡಿಗೆ ಮತ್ತು ಕೂಡಮಂಗಳೂರು ಹನುಮ ಸೇನಾ ಸೇವಾ ಸಮಿತಿ, ಹಾರಂಗಿ ವೀರ ಹನುಮ ಸೇವಾ ಸಮಿತಿಗಳ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಮಂಟಪ ಸಮಿತಿಯ ಅಧ್ಯಕ್ಷರಾದ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.
ಆಂಜನೇಯ ದೇವಾಲಯದ ಮಂಟಪ ಸೇರಿದಂತೆ ಒಟ್ಟು ಎಂಟು ಮಂಟಪಗಳಿಗೆ ಅಂದಾಜು ೧ ಕೋಟಿ ರೂಗಳಿಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ವಿವರ ನೀಡಿದ್ದಾರೆ. ಶೋಭಾ ಯಾತ್ರೆಯ ಸಂದರ್ಭ ಯಾವುದೇ ವಾಹನಗಳಿಗೆ ಸಂಚಾರ ಅಡ್ಡಿ ಉಂಟಾಗಬಾರದು.
ಡಿಜೆ ವಿಷಯದಲ್ಲಿ ಮತ್ತು ರಾತ್ರಿ ಸಮಯದ ಮಿತಿ ಸಂಬAಧ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೋಭಾಯಾತ್ರೆ ಸಂದರ್ಭ ಸಮರ್ಪಕ ಸಂಚಾರ ವ್ಯವಸ್ಥೆಗಾಗಿ ಕೆಲವು ಬದಲಿ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಹನುಮ ಜಯಂತಿ ಶೋಭಾಯಾತ್ರೆ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುವ ಹನುಮ ಜಯಂತಿ ದಶಮಂಟಪ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಈ ಬಾರಿ ಇನ್ನೂ ವಿಜೃಂಭಣೆಯಿAದ ನಡೆಸುವ ಗುರಿ ಹೊಂದಲಾಗಿದೆ ಎಂದು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಆಂಜನೇಯ ದೇವಾಲಯದಿಂದ ಹೊರಡುವ ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು ಮತ್ತು ನೆರೆ ಜಿಲ್ಲೆಗಳ ಹನುಮ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಶೋಭಾಯಾತ್ರೆ ಸಂದರ್ಭ ಕುಶಾಲನಗರ ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ವಿವಿಧೆಡೆಗಳಿಂದ ಅಂದಾಜು ೨೦ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.ಡಿಸೆಂಬರ್ ೨ರಂದು ಹನುಮ ಜಯಂತಿ ಅಂಗವಾಗಿ ಹನುಮ ಜಯಂತಿ ದಶಮಂಟಪಗಳ ಸಮಿತಿ ಆಶ್ರಯದಲ್ಲಿ ಅದ್ದೂರಿ ಹನುಮಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಂಟಪಗಳ ಸಮಿತಿ ಅಧ್ಯಕ್ಷರಾದ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.
ಕುಶಾಲನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಂಜೆ ರಥ ಬೀದಿಯ ಆಂಜನೇಯ ಉತ್ಸವ ಸಮಿತಿ ಸೇರಿದಂತೆ ಒಟ್ಟು ಎಂಟು ಮಂಟಪಗಳು ಮೆರವಣಿಗೆ ಮೂಲಕ ತೆರಳಲಿವೆ.
ಅವುಗಳಲ್ಲಿ ೭ ಮಂಟಪಗಳು ತಮ್ಮ ಮಂಟಪಗಳ ಪ್ರದರ್ಶನ ನೀಡಲಿವೆ.
ರಾತ್ರಿ ೮ ಗಂಟೆಗೆ ಗಣಪತಿ ದೇವಾಲಯ ಮುಂಭಾಗ ಕುಶಾಲನಗರ ಎಚ್ಆರ್ಪಿ ಕಾಲೋನಿಯ ಅಂಜನಿಪುತ್ರ ಜಯಂತೋತ್ಸವ ಆಚರಣೆ ಮಂಟಪ ರಾತ್ರಿ ೮:೩೦ ಕ್ಕೆ ಹಾರಂಗಿ ಭಾಗದಿಂದ ಬರುವ ವೀರ ಹನುಮಾನ್ ಸೇವಾ ಸಮಿತಿ ಮಂಟಪ ನಂತರ ೮:೪೫ಕ್ಕೆ ಗೋಪಾಲ ಸರ್ಕಲ್ ಬಳಿಯಿಂದ ಟೀಮ್ ಕೇಸರಿ ಅವರ ನೇತೃತ್ವದ ಪ್ರದರ್ಶನ ನೀಡಲಿದೆ.
ನಂತರ ಮಾದಾಪಟ್ಟಣದ ಶ್ರೀರಾಮ ದೂತ ಜಯಂತಿ ಆಚರಣೆ ಸಮಿತಿಯ ಮಂಟಪ ೯ ಗಂಟೆಗೆ, ಇಂದಿರಾ ಬಡಾವಣೆಯಿಂದ ಹೊರಡಲಿರುವ ಟೀಂ ಮಹಾ ವೀರ ಹನುಮಾನ್ ಸೇವಾ ಸಮಿತಿ ಮಂಟಪ ರಾತ್ರಿ ೯:೩೦ಕ್ಕೆ ಪ್ರದರ್ಶನ ನೀಡಲಿವೆ. ನಂತರ ಕೂಡಿಗೆ, ಕೂಡುಮಂಗಳೂರಿನಿAದ ಆಗಮಿಸುವ ಹನುಮ ಸೇವಾ ಸಮಿತಿಯ ಮಂಟಪ ರಾತ್ರಿ ೧೦.೩೦ ಹಾಗೂ ಗುಡ್ಡೆಹೊಸೂರು ಬಳಿಯಿಂದ ಬರುವ ವೀರಾಂಜನೇಯ ಸೇವಾ ಸಮಿತಿ ಮಂಟಪ ರಾತ್ರಿ ೧೧:೩೦ ಗಂಟೆಗೆ ಪ್ರದರ್ಶನ ನೀಡಲಿದೆ ಎಂದು ಮಾಹಿತಿ ಒದಗಿಸಿದರು.
ಶೋಭಾಯಾತ್ರೆಯ ಯಶಸ್ವಿಗಾಗಿ ಈಗಾಗಲೇ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಮಂಟಪ ಸಮಿತಿಗಳು ಹಲವು ಬಾರಿ ಪೂರ್ವಭಾವಿ ಸಭೆಗಳನ್ನು ನಡೆದಿದೆ.
ಮಂಟಪಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಟ್ರೋಫಿ ಹಾಗೂ ಪಾಲ್ಗೊಳ್ಳುವ ಎಲ್ಲಾ ಮಂಟಪಗಳಿಗೆ ಸಮಾಧಾನಕರ ಬಹುಮಾನ, ಟ್ರೋಫಿ ನೀಡಲಾಗುತ್ತದೆ ಎಂದರು.
ಈ ಸಂದರ್ಭ ಮಂಟಪ ಸಮಿತಿಯ ಉಪಾಧ್ಯಕ್ಷರಾದ ಟಿ.ವಿ. ಕಿಶೋರ್, ಪ್ರಧಾನ ಕಾರ್ಯದರ್ಶಿ ಪಿ.ಆರ್. ರಾಮನಾಥನ್, ಖಜಾಂಚಿ ಡಿ.ವಿ. ಗಿರೀಶ್, ಸಹ ಕಾರ್ಯದರ್ಶಿ ಸಿ.ಎನ್. ಸುನಿಲ್ ಮತ್ತು ಕೆ.ಎನ್. ದೇವರಾಜ್ ಇದ್ದರು.