ಭಾಗಮಂಡಲ, ನ. ೨೮: ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಸಭಾಭವನದಿಂದ ಕ್ಷೇತ್ರದ ಭಕ್ತರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

ಭಾಗಮಂಡಲದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪತಿಯಲ್ಲಿ ನಿರ್ವಹಣೆ ಮಾಡುವಂತೆ ಇಲ್ಲಿನ ಧಾರ್ಮಿಕ ಕೇಂದ್ರಗಳಲ್ಲೂ ಉತ್ತಮ ನಿರ್ವಹಣೆ ಆಗಬೇಕು. ಪ್ಲಾಸ್ಟಿಕ್ ತ್ಯಾಜ್ಯಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತಾಗಬೇಕು. ತಲಕಾವೇರಿ ಭಾಗಮಂಡಲ, ಇಗ್ಗುತ್ತಪ್ಪ ದೇವಾಲಯಗಳಲ್ಲಿ ಪ್ರವಾಸಿಗರ ವಾಹನಗಳ ತಪಾಸಣೆ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.

ಶಾಸಕ ಎ.ಎಸ್. ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ದಶಕಗಳಿಂದ ಕಾವೇರಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಈ ಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದು ಮನವಿಗೆ ಸ್ಪಂದಿಸಿ ಸರ್ಕಾರದ ವತಿಯಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದೆ . ಜಾತಿ, ಜನಾಂಗ ಎಂದು ತಾರತಮ್ಯ ಮಾಡದೆ ಸರ್ಕಾರ ಎಲ್ಲಾ ವರ್ಗದವರಿಗೆ ಅನುದಾನ ನೀಡಿದೆ. ಸರ್ಕಾರದ ಅನುದಾನದ ಸದ್ಬಳಕೆಯಿಂದ ವ್ಯವಸ್ಥಿತ ಸಭಾಭವನ ನಿರ್ಮಾಣಗೊಳ್ಳಲಿ ಎಂದರು.

ಕೊಡವ ಸಮಾಜಗಳ ಒಕ್ಕೂಟ ಫೆಡರೇಷನ್ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಸಭಾಭವನ ಆದಷ್ಟು ಶೀಘ್ರ ನಿರ್ಮಾಣವಾಗಬೇಕಿದೆ. ಕ್ರಿಯಾ ಯೋಜನೆಗೆ ತಕ್ಕಂತೆ ಸಭಾಭವನ ನಿರ್ಮಾಣ ಆಗಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ ಅಧ್ಯಕ್ಷ ಮುದ್ದಂಡ ದೇವಯ್ಯ, ನಾಪೋಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷ ವೆಂಕಟೇಶ್ ಕೋಳಿಬೈಲು, ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು, ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ , ಬಿಜೆಪಿ ಮುಖಂಡರಾದ ಮನು ಮುತ್ತಪ್ಪ, ಕಾಂತಿ ಸತೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.