ಸೋಮವಾರಪೇಟೆ, ನ. ೨೬: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಡಿಕೇರಿ ಮತ್ತು ವಿವಿಧ ಸೇವಾಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿಶೇಷಚೇತನರು ಸಂಭ್ರಮದಿAದ ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷೆ ತನ್ಮಯಿ ಪ್ರವೀಣ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಅಂಗವೈಕಲ್ಯಗಳು ಶಾಪವಲ್ಲ. ವಿಶೇಷಚೇತನರು ಸಮಾಜದಲ್ಲಿ ಎಲ್ಲರಷ್ಟೇ ಹಕ್ಕುಗಳನ್ನು ಹೊಂದಿರುತ್ತಾರೆ.

ಇವರ ಹಕ್ಕುಗಳು, ಅಗತ್ಯಗಳು ಹಾಗೂ ಕನಸುಗಳನ್ನು ಸಾಧ್ಯವಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಇಂತಹ ಕ್ರೀಡಾಕೂಟಗಳು ಇವರ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಗಳು ಎಂದು ಅಭಿಪ್ರಾಯಪಟ್ಟರು.

ಮೈದಾನದಲ್ಲಿ ಹಮ್ಮಿಕೊಳ್ಳಲಾದ ಓಟ, ಭಾರದ ಗುಂಡು ಎಸೆತ, ವೇಗದ ನಡಿಗೆ, ಗಾಯನ ಸೇರಿದಂತೆ ಸುಮಾರು ಹದಿನೇಳು ಕ್ರೀಡಾ ವಿಭಾಗಗಳಲ್ಲಿ ವಿಶೇಷಚೇತನರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಮಕ್ಕಳ ಕ್ರೀಡಾಪ್ರತಿಭೆಯನ್ನು ವೀಕ್ಷಿಸಿದ ಪೋಷಕರು, ಅತಿಥಿಗಳು ಮತ್ತು ಸಾರ್ವಜನಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಪ್ರತಿ ಸ್ಪರ್ಧೆಯಲ್ಲೂ ಭಾಗವಹಿಸಿದವರ ಗೆಲುವಿಗಿಂತಲೂ ಅವರ ಧೈರ್ಯ ಮತ್ತು ಮನೋಬಲವೇ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಗಮನ ಸೆಳೆಯಿತು.

ಶಾಸಕ ಡಾ. ಮಂತರ್ ಗೌಡ ಕ್ರೀಡಾಕೂಟಕ್ಕೆ ಆಗಮಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಸೋಮವಾರಪೇಟೆ ಆಯುಷ್ ಇಲಾಖೆಯಿಂದ ಕ್ರೀಡಾಪಟುಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ, ಮಾತ್ರೆ ವಿತರಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷಚೇತನರ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ಜೇಸಿ ಸಂಸ್ಥೆ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು, ಲಯನ್ಸ್ ಕಾರ್ಯದರ್ಶಿ ಮಂಜುನಾಥ್ ಚೌಟ, ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಹರೀಶ್, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಪ್ಪ, ಸುನಿತಾ, ಸ್ವಸ್ಥ ಮತ್ತು ಸನ್ನಿಧಿ ಶಾಲೆಯ ಶಿಕ್ಷಕರು ಇದ್ದರು.