(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ನ. ೨೫ : ದ. ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಪಟ್ಟಣದ ಅನತಿ ದೂರದಲ್ಲಿರುವ ದೇವನೂರು ಬಳಿ ಮಾದೇಶ್ವರ ದೇವಾಲಯ ನಿರ್ಮಾಣವಾಗುತ್ತಿದ್ದು ಮುಂದೆ ಈ ದೇವಾಲಯವು ಧಾರ್ಮಿಕ ಕೇಂದ್ರವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ. ಸುಂದರ ಪರಿಸರದ ನಡುವೆ ಎರಡೂವರೆ ಎಕರೆ ವಿಸ್ತೀರ್ಣದ ಮಧ್ಯ ಭಾಗದಲ್ಲಿ ಈ ದೇವಾಲಯವು ನಿರ್ಮಾಣವಾಗುತ್ತಿದ್ದು, ಈಗಾಗಲೇ ದೇವಸ್ಥಾನದ ಪ್ರಗತಿ ಕಾರ್ಯಗಳು ಭರದಿಂದ ಸಾಗುತ್ತಿವೆ.
ವನಸಿರಿಯ ನಡುವೆ ಸುಂದರ ಜಾಗವಿದ್ದು ಕಳೆದ ೩೦೦ ವರ್ಷಗಳ ಹಿಂದೆಯೇ ಇದ್ದಂತಹ ಈಶ್ವರನ ವಿಗ್ರಹಕ್ಕೆ ಪೂಜಾಕಾರ್ಯ ನಡೆಯುತ್ತಿದ್ದ ಕುರುಹುಗಳು ಕಂಡುಬAದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಸಲುವಾಗಿ ಯೋಜನೆ ರೂಪಿಸಿದರು. ಈ ಜಾಗದಲ್ಲಿ ಉತ್ತಮ ದೇವಾಸ್ಥಾನದ ನಿರ್ಮಾಣ ಮಾಡುವ ಸಲುವಾಗಿ ಸ್ಥಳೀಯ ಗ್ರಾಮಸ್ಥರು ಒಟ್ಟುಗೂಡಿ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಲೇ ಬಂದಿದ್ದರು. ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕೇಂದ್ರವೊAದನ್ನು ಆರಂಭಿಸುವ ಸಲುವಾಗಿ ಯೋಜನೆ ರೂಪಿಸಿದ್ದರು.
ಹಿರಿಯರ ಹಾಗೂ ಊರಿನವರ ಮಾರ್ಗದರ್ಶನ ಪಡೆದ ದೇವಾಲಯದ ನೂತನ ಸಮಿತಿಯು ಆರಂಭದಲ್ಲಿ ತಮ್ಮ ಕೈಯಿಂದಲೇ ಲಕ್ಷಾಂತರ ಹಣವನ್ನು ದೇವಾಲಯದ ಅಭಿವೃದ್ಧಿಗಾಗಿ ನೀಡುತ್ತಲೇ ದೇವಾಲಯದ ಅಭಿವೃದ್ಧಿಗೆ ಪಣತೊಟ್ಟರು. ನಾಗರಿಕರು ನೀಡಿದ ಹಣದಿಂದ ಸುಂದರ ಪರಿಸರದ ನಡುವೆ ದೇವಾಲಯ ಸ್ಥಾಪನ ಕಾರ್ಯ ಯಶಸ್ವಿಯಾಗಿ ಆರಂಭವಾಯಿತು. ಇದೀಗ ನಿಗದಿತ ಸಮಯದೊಳಗೆ ದೇವಾಲಯವನ್ನು ಲೋಕಾರ್ಪಣೆ ಮಾಡಲು ಸಮಿತಿಯು ಹಗಲಿರುಳೆನ್ನದೆ ಶ್ರಮಿಸುತ್ತಿದೆ.
ಪ್ರಸ್ತುತ ದೇವಾಲಯ ನಿರ್ಮಾಣದ ಉಸ್ತುವಾರಿಯನ್ನು ಆದೇಂಗಡ ವಾಸು ವಹಿಸಿದ್ದು, ದೇವಾಲಯ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಇವರಿಗೆ ಸಹಕಾರಿಯಾಗಿ ದೇವಾಲಯ ಆಡಳಿತ ಮಂಡಳಿಯ ೧೨ ಮಂದಿ ಸಹಕಾರ ನೀಡುತ್ತಲೇ ಬಂದಿದ್ದಾರೆ. ಈಶ್ವರನಿಗೆ ನೆಲೆನೀಡುವ ಸಲುವಾಗಿ ದೇವನೂರಿನಲ್ಲಿ ಮಾದೇಶ್ವರ ದೇವಾಲಯ ಸ್ಥಾಪಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ದೇವಾಲಯವು ಉತ್ತಮ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಈಗಾಗಲೇ ಎಲ್ಲಾ ರೀತಿಯ ಪ್ರಯತ್ನಗಳು ಶರವೇಗದಲ್ಲಿ ನಡೆಯುತ್ತಿದೆ.
ಮಾದೇಶ್ವರ ದೇವಾಲಯವು ವನ ಸಿರಿಯ ನಡುವೆ ಸುಂದರವಾದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ದೇವಾಲಯಕ್ಕೆ ತೆರಳಲು ಮುಖ್ಯ ರಸ್ತೆಯಿಂದ ಉತ್ತಮ ರಸ್ತೆಯನ್ನು ಮಾಡಲಾಗಿದೆ. ಬಾಳೆಲೆ, ಕೈನಾಟಿ ಸಮೀಪದಿಂದ ಭಕ್ತಾದಿಗಳು ಕಾಲ್ನಡಿಗೆಯ ಮೂಲಕ ಆಗಮಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.
ಸುಂದರ ವನಸಿರಿಯ ನಡುವೆ ಮಾದೇಶ್ವರ ದೇವಾಲಯವು ನಿರ್ಮಾಣವಾಗುತ್ತಿರುವುದರಿಂದ ಸಹಜವಾಗಿಯೇ ಈ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಾಳೆಲೆ-ಪೊನ್ನಪ್ಪಸಂತೆ ಮುಖ್ಯ ರಸ್ತೆಯ ಅನತಿ ದೂರದ ದೇವನೂರು ಗ್ರಾಮದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ಬಾಳೆಲೆ, ದೇವನೂರು ಹಾಗೂ ಸುಳುಗೋಡು ಗ್ರಾಮದ ಸುತ್ತಮುತ್ತಲಿನಲ್ಲಿ ಕಾಫಿ ಬೆಳೆಗಾರರು, ರೈತರು ಸೇರಿದಂತೆ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
೩೦೦ ವರ್ಷ ಇತಿಹಾಸವಿರುವ ಈ ಭಾಗದಲ್ಲಿ ಇಲ್ಲಿಯ ತನಕ ಧಾರ್ಮಿಕ ಕೇಂದ್ರ ಆರಂಭವಾಗಿರಲಿಲ್ಲ.
ಇದೀಗ ಈ ಭಾಗದ ಗ್ರಾಮಸ್ಥರು ದೇವಾಲಯ ಸ್ಥಾಪನೆ ಮಾಡುವ ಮೂಲಕ ಭಕ್ತರಿಗೆ ಇದರ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ. ನಿರ್ಮಾಣವಾಗುತ್ತಿರುವ ಮಾದೇಶ್ವರ ದೇವಾಲಯವು ಸುಂದರ ಪರಿಸರದ ನಡುವೆ ಸ್ಥಾಪನೆ ಆಗುತ್ತಿರುವುದು ಇಲ್ಲಿಯ ಮತ್ತೊಂದು ವಿಶೇಷ.