ಮಡಿಕೇರಿ, ನ. ೨೬: ಕಾವೇರಿ ನದಿ ಕಲುಷಿತಗೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವುದರೊಂದಿಗೆ ನದಿ ತಟದ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡೆಯಿತು.
ರೈತ ಸಂಘ, ಕರ್ನಾಟಕ ಯುವ ರಕ್ಷಣಾ ವೇದಿಕೆ, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ, ಕೊಡಗು ಜಿಲ್ಲಾ ಹೊಟೇಲ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾದರು.
ಕೊಡಗು ಅಭಿವೃದ್ಧಿ ಸಮಿತಿ ಸ್ಥಾಪಕ ಪ್ರಸನ್ನ ಭಟ್ ಮಾತನಾಡಿ, ಮೂಲದಲ್ಲಿ ಕಾವೇರಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರಕಾರ ಹಾಗೂ ಅಧಿಕಾರಿಗಳು ನದಿ ಸ್ವಚ್ಛತೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ನದಿ ತಟದ ಬಫರ್ಝೋನ್ ವ್ಯಾಪ್ತಿ ಒತ್ತುವರಿಯಾಗುತ್ತಿದ್ದು, ೧೫ ದಿನಗಳೊಳಗೆ ತೆರವು ಕಾರ್ಯಕ್ಕೆ ಆಡಳಿತ ಮುಂದಾಗದಿದ್ದಲ್ಲಿ ವಿವಿಧ ಸಂಘ-ಸAಸ್ಥೆ, ಹೋರಾಟಗಾರರನ್ನು ಸಂಘಟಿಸಿ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಅಧಿಕಾರ, ಆಡಳಿತ ಬದಲಾಗುವ ರೀತಿ ನದಿ ಬದಲಾಗಬಾರದು. ಜಲಮೂಲದ ರಕ್ಷಣೆ ಸರಕಾರದ ಆದ್ಯತೆಯಾಗಬೇಕು. ನಿರಂತರವಾಗಿ ಈ ಕುರಿತು ಗಮನಸೆಳೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ಕಾವೇರಿ ನದಿಯ ಗುಣಮಟ್ಟ ಕ್ಷೀಣಿಸುತ್ತಿದೆ. ಮನುಷ್ಯರ ಹಸ್ತಕ್ಷೇಪವೇ ಜಲಮೂಲ ಮಲಿನಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಬಿಗಿ ಕಾನೂನು ಕ್ರಮಗಳನ್ನು ಸರಕಾರ ರೂಪಿಸಬೇಕೆಂದು ಆಗ್ರಹಿಸಿದರು.
ರೈತ ಸಂಘ ರಾಜ್ಯ ಸಂಚಾಲಕ ಸೈಯ್ಯದ್ ಅಬ್ದುಲ್ಲ ಮಾತನಾಡಿ, ಕಾವೇರಿ ಹುಟ್ಟುವ ಕೊಡಗಿನಲ್ಲಿಯೇ ನದಿ ಕಲುಷಿತವಾಗುತ್ತಿರುವುದು ಶೋಚನೀಯ ಸಂಗತಿ. ೮೦೦ ಕಿ.ಮೀ. ಹರಿಯುವ ನದಿ ಸ್ವಚ್ಛತೆ ಮಾಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಸಮಸ್ಯೆ ಪರಿಹರಿಸದಿದ್ದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್. ಸುನಿಲ್ ಮಾತನಾಡಿ, ಕಾವೇರಿ ದಕ್ಷಿಣ ಭಾರತದ ಗಂಗೆಯಾಗಿದ್ದು, ಪಾವಿತ್ರö್ಯತೆಯನ್ನು ರಕ್ಷಿಸಿ ಕಲುಷಿತ ತಡೆಗೆ ಬಿಗಿ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ, ಇತ್ತೀಚಿಗಷ್ಟೆ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ಮಾಡಿ ಸ್ವಚ್ಛತೆ ಜಾಗೃತಿ ಮೂಡಿಸಿ ಮಾಲಿನ್ಯ ರಹಿತದತ್ತ ಹೆಜ್ಜೆ ಹಾಕಿದ್ದೇವೆ. ಜನರು ಕೂಡ ಜಾಗೃತಿಗೊಂಡು ಕಾವೇರಿ ರಕ್ಷಣೆಗೆ ಮುಂದಾಗಬೇಕು. ಸರಕಾರ ಹಾಗೂ ಅಧಿಕಾರಿಗಳು ಕ್ರಮಗಳನ್ನು ಕೈಗೊಂಡು ಕಲುಷಿತ ತಡೆಗೆ ಮುತುವರ್ಜಿ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾನಿರತ ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಆಗಮಿಸಿದ ಸಂದರ್ಭ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಬೇಕೆಂದು ಹೋರಾಟಗಾರರು ಪಟ್ಟುಹಿಡಿದರು.
ಜಿಲ್ಲಾಧಿಕಾರಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ತಿಳಿಸಿದ ಸಂದರ್ಭ ಅವರು ಬರುವ ತನಕ ಕಾಯುವುದಾಗಿ ಪ್ರತಿಭಟನಾನಿರತರು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಕೊಡಗು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಪ್ರಮೋದ್, ಸಂದೀಪ್, ಮೈಕಲ್, ಲೀಲಾ ಶೇಷಮ್ಮ, ದಾವೂದ್, ಲವಕುಮಾರ್, ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಮಾಲಿಕಾ ಅವರ್ತಿ, ಸಂಘಟನಾ ಕಾರ್ಯದರ್ಶಿ ವಾಸು, ಪ್ರಮುಖರಾದ ರೇಣು ಗೌಡ, ಅನಸೂಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.