ಕಣಿವೆ, ನ. ೨೬ : ಕುಶಾಲನಗರ ತಾಲೂಕಿನ ಕಣಿವೆ ಹಕ್ಕೆ ಅವಳಿ ಗ್ರಾಮದ ಮುಖ್ಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ಸೌಲಭ್ಯ ಇಲ್ಲದ ಕಾರಣ ಜನವಸತಿಯ ತ್ಯಾಜ್ಯ ನೀರು ಹಾಗೂ ಮಳೆಯ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾದ ಕಾರಣ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಸ್ಥಳ ಪರಿಶೀಲಿಸಿದರು. ಹಕ್ಕೆ ಗ್ರಾಮದ ಮೇಲ್ಭಾಗದಿಂದ ಹರಿದುಬರುವ ನೀರು ಹೆದ್ದಾರಿಯಿಂದ ಮುಂದಕ್ಕೆ ಹರಿಯಲು ಚರಂಡಿ ಇಲ್ಲದ ಕಾರಣ ನಿಲುಗಡೆಗೊಂಡು ಮನೆಗಳಿಗೆ ನುಗ್ಗುತ್ತದೆ. ಆದ್ದರಿಂದ ಸೂಕ್ತ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಸಂಪತ್ತು, ವಿಶ್ವ ಮೊದಲಾದವರು ತಹಶೀಲ್ದಾರ್ ಅವರಲ್ಲಿ ನಿವೇದಿಸಿಕೊಂಡರು.
ಸ್ಥಳಕ್ಕೆ ಹೆಬ್ಬಾಲೆ ಗ್ರಾಪಂ ಪಿಡಿಓ ಅವರನ್ನು ಕರೆಸಿದ ತಹಶೀಲ್ದಾರ್ ನಿವಾಸಿಗಳಿಗೆ ಸಮಸ್ಯೆಯಾಗದಂತೆ ಸೂಕ್ತ ಚರಂಡಿ ನಿರ್ಮಿಸಿಕೊಡಲು ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಮುಂದಿನ ಮಳೆಗಾಲದ ಒಳಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು. ಕುಶಾಲನಗರ ಕಂದಾಯ ಅಧಿಕಾರಿ ಸಂತೋಷ್ ಇದ್ದರು.