ಸಿದ್ದಾಪುರ, ನ. ೨೪: ವ್ಯಕ್ತಿಯೋರ್ವ ಮದ್ಯಪಾನ ಮಾಡಿ ಕಾರು ಚಲಾಯಿಸಿ ಪಿಡಿಓ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆಯಲ್ಲಿ ಮಗುಚಿ ಬಿದ್ದು ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿ.ಡಿ.ಓ ಮತ್ತು ಅವರ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.

ಭಾನುವಾರದಂದು ಹೊಸ್ಕೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ತೆರಳಿ ಹಿಂತಿರುಗಿ ಪಾಲಿಬೆಟ್ಟ ಮಾರ್ಗವಾಗಿ ಪೊನ್ನಂಪೇಟೆಗೆ ತೆರಳುತ್ತಿದ್ದರು. ಈ ಸಂದರ್ಭ ಪಾಲಿಬೆಟ್ಟದ ಟಾಟಾ ಸಂಸ್ಥೆಯ ಗಾಲ್ಫ್ ಮೈದಾನ ಸಮೀಪದ ರಸ್ತೆಯಲ್ಲಿ ಗೋಣಿಕೊಪ್ಪಲುವಿನಿಂದ ಪಾಲಿಬೆಟ್ಟದ ಕಡೆಗೆ ಬರುತ್ತಿದ್ದ ಅಶೋಕ ಎಂಬಾತ ಚಾಲಿಸುತಿದ್ದ ಆಲ್ಟೊ ಕಾರು ಅತಿ ವೇಗವಾಗಿ ಬಂದು ಪಿ.ಡಿ.ಓ ಪುಟ್ಟರಾಜು ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಿ.ಡಿ.ಓ ಅವರು ಚಲಾಯಿಸುತ್ತಿದ್ದ ಕಾರು ರಸ್ತೆಯಲ್ಲೇ ಮಗುಚಿಕೊಂಡಿದೆ. ಅದೃಷ್ಟವಶಾತ್ ಪಿ.ಡಿ.ಓ. ಅವರ ಕಾರಿನಲ್ಲಿದ್ದ ಅವರ ಪತ್ನಿ, ಮಕ್ಕಳಿಗೆ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿಗೆ ಹಾನಿಯಾಗಿದೆ.

ಈ ಬಗ್ಗೆ ಪಿ.ಡಿ.ಓ ಪುಟ್ಟರಾಜು ಅವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ತನಿಖೆ ನಡೆಸಿದ ಸಂದರ್ಭ ಆಲ್ಟೊ ಕಾರಿನ ಚಾಲಕ ಪಾಲಿಬೆಟ್ಟದ ಆರ್ಕಾಡ್ ಬಳಿಯ ಖಾಸಗಿ ಸಂಸ್ಥೆಯ ಕಾರ್ಮಿಕ ಅಶೋಕ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದರಿಂದ ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಅಪಘಾತ ಸಂಭವಿಸಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಆರೋಪದಡಿಯಲ್ಲಿ ಅಶೋಕನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಅಪಘಾತ ನಡೆಸಿದ ಅಶೋಕನಿಗೆ ಸೇರಿದ ಕಾರನ್ನು ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಿ.ಡಿ.ಓ.ಗೆ ಸೇರಿದ ಕಾರು ಮಗುಚಿ ಕೊಂಡಾಗ ಸ್ಥಳೀಯರು ತಕ್ಷಣವೇ ಕಾರನ್ನು ಮೇಲೆತ್ತಿ ಸಹಕರಿಸಿದರು.

-ವಾಸು