ವೀರಾಜಪೇಟೆ, ನ. ೨೪: ಹೊನಲು ಬೆಳಕಿನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಣೆಗೆ ಬಂದಿದ್ದ ಎರಡು ತಂಡಗಳ ಬೆಂಬಲಿತ ಪ್ರೇಕ್ಷಕರ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟ ಘಟನೆ ವೀರಾಜಪೇಟೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಕಲ್ಲುಬಾಯ್ಸ್ ತಂಡದ ವತಿಯಿಂದ ಕಡಂಗ ಗ್ರಾಮದ ಆಟಗಾರರು ಹಾಗೂ ಕೇರಳ ರಾಜ್ಯದ ಆಟಗಾರರ ನಡುವೆ ಫುಟ್ಬಾಲ್ ಪಂದ್ಯ ಕಳೆದ ಮೂರು ದಿನಗಳಿಂದ ನಡೆಯುತ್ತಿತ್ತು. ಭಾನುವಾರ (ನ.೨೩) ರಾತ್ರಿ ಹೊನಲು ಬೆಳಕಿನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರು ಎರಡು ತಂಡದ ಆಟಗಾರರನ್ನು ಶಿಳ್ಳೆ, ಚಪ್ಪಾಳೆಗಳಿಂದ ಹುರಿದುಂಬಿಸುತ್ತಿದ್ದರು.
ಈ ನಡುವೆ ಕೆಲ ಪ್ರೇಕ್ಷಕರು ಕೇರಳ ಗೆಲುವು ಸಾಧಿಸುತ್ತದೆ ಎಂದರೆ, ಇನ್ನೂ ಕೆಲವರು ಕೊಡಗಿನ ಕಡಂಗ ಗ್ರಾಮದ ಆಟಗಾರರೇ ಗೆಲುವು ಸಾಧಿಸುತ್ತಾರೆ ಎಂದು ಚೀರತೊಡಗಿದರು. ಆ ಸಂದರ್ಭ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದೆ. ಕೊನೆಗೆ ರೊಚ್ಚಿಗೆದ್ದು ಎರಡೂ ಗುಂಪಿನವರು ಕುರ್ಚಿ ಎಸೆದಾಡಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ವೀರಾಜಪೇಟೆ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಎರಡೂ ಗುಂಪುಗಳನ್ನು ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.