ಗೋಣಿಕೊಪ್ಪಲು, ನ. ೨೩ : ರಸ್ತೆ ದುಸ್ಥಿತಿಯ ಬಗ್ಗೆ ಸರ್ಕಾರ ಹಾಗೂ ಶಾಸಕರ ಗಮನ ಸೆಳೆಯುವ ನಿಟ್ಟಿನಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ತಾ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ವೀರಾಜಪೇಟೆಯ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುವಿನ್ ಗಣಪತಿ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಮುಖ್ಯ ರಸ್ತೆಗಳು ತೀವ್ರ ಹದಗೆಟ್ಟಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮಳೆ ಬಿಡುವು ನೀಡಿದ ನಂತರ ಎಲ್ಲೆಡೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪ್ರಮುಖರು ಹೇಳಿಕೆ ನೀಡಿದ್ದರು. ಇದೀಗ ಮಳೆ ಬಿಡುವು ನೀಡಿ ೨೩ ದಿನ ಕಳೆದಿದ್ದರೂ ಮುಖ್ಯ ರಸ್ತೆಯ ದುರಸ್ತಿ ಕಾರ್ಯ ಇನ್ನೂ ಕೈಗೆತ್ತಿಕೊಂಡಿಲ್ಲ.

ಇದರಿAದಾಗಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ವಿರೋಧ ಪಕ್ಷವಾಗಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹಾಗೂ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್ ಮಾತನಾಡಿ, ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಆಗದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವೀರಾಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಮಾತನಾಡಿ, ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ರಸ್ತೆ ಅಭಿವೃದ್ಧಿಗೆ ಕೋಟಿ, ಕೋಟಿ ಅನುದಾನ ಬಂದಿದೆ ಎಂದು ಪ್ರಚಾರ ನೀಡಿದರೆ ಸಾಲದು, ನಿಖರವಾಗಿ ಜನರ ಮುಂದೆ ತಮ್ಮ ಅನುದಾನ ಬಗ್ಗೆ ಮಾಹಿತಿ ನೀಡಿ ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿವೆ. ಕಳೆದ ಎರಡೂವರೆ ವರ್ಷದಿಂದ ರಸ್ತೆ ನಿರ್ವಹಣೆ ಇಲ್ಲದೆ ಇಂದು ರಸ್ತೆ ಹದಗೆಡಲು ಕಾರಣವಾಗಿದೆ. ರಸ್ತೆ ದುರಸ್ತಿ ಒತ್ತಾಯಿಸಿ ನಡೆಸುವ ಪ್ರತಿಭಟನೆಗೆ ಬೆಂಬಲ ನೀಡಲು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಉಪಸ್ಥಿತರಿದ್ದರು.