ಮಡಿಕೇರಿ, ನ. ೨೩: ಕಳೆದ ೨೦೧೮ರಲ್ಲಿ ಭೂಕುಸಿತಕ್ಕೊಳಗಾಗಿ ಮನೆ ಕಳೆದುಕೊಂಡಿದ್ದ ಮಂದಿಗೆ ನಿರ್ಮಿಸಿಕೊಡಲಾಗಿರುವ ನಿರಾಶ್ರಿತರ ಬಡಾವಣೆಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದ್ದು, ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಿಕೊಡದಿದ್ದಲ್ಲಿ ಪ್ರತಿಭಟನೆ ನಡೆಸಲು ಸಂತ್ರಸ್ತ ನಿವಾಸಿಗಳು ನಿರ್ಧರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಕೇರಿ ಗ್ರಾಮ ಪಂಚಾಯಿತಿಯ ಬಿಳಿಗೇರಿ ವಾರ್ಡ್ ೨ರ ಸದಸ್ಯ ಎ.ಅಬ್ದುಲ್ ಖಾದರ್; ಭೂಕುಸಿತ ಸಂದರ್ಭ ಮಡಿಕೇರಿಯ ಇಂದಿರಾನಗರದಲ್ಲಿ ವಾಸವಿದ್ದ ಸುಮಾರು ೨೨ ಮಂದಿ ನಿರಾಶ್ರಿತರಿಗೆ ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಆದರೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿರುವುದಿಲ್ಲ. ಕೊಳವೆ ಬಾವಿ ಒಂದು ಇದ್ದು, ಅದರಲ್ಲಿನ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ, ಮಣ್ಣು ಮಿಶ್ರಿತ ನೀರು ಬರುತ್ತಿದ್ದು, ಯಾವದಕ್ಕೂ ಉಪಯೋಗವಾಗುತ್ತಿಲ್ಲ. ನೆರೆಯ ಹಾಕತ್ತೂರು ಪಂಚಾಯ್ತಿ ವತಿಯಿಂದ ಮೇಕೇರಿ ಗ್ರಾಮಕ್ಕೆ ಸೇರಿದ ಜಾಗದಲ್ಲಿ ಕೊಳವೆ ಬಾವಿ ಕೊರೆದು ನೀರಿನ ಟ್ಯಾಂಕ್ ನಿರ್ಮಿಸಿದ್ದರೂ ಅದರಿಂದಲೂ ನೀರು ಒದಗಿಸುತ್ತಿಲ್ಲ. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಅವರ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವದೇ ಕ್ರಮ ಆಗಿರುವದಿಲ್ಲ. ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಜಿ.ಪಂ. ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಹೇಳಿದರು.
ಸರಕಾರದ ವತಿಯಿಂದ ವಸತಿ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ ಮಾಡಲು ಅವಕಾಶ ನೀಡಲಾಗುತ್ತದೆ. ಮನೆ ನಿರ್ಮಾಣದ ಬಳಿಕ ವಿದ್ಯುತ್ ಸಂಪರ್ಕ ಹೊಂದಿಕೊಳ್ಳಲು ಫಾರಂ ೯, ೧೧ ಆಗಬೇಕು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕೆಂದು ಸಬೂಬು ಹೇಳಲಾಗುತ್ತಿದೆ, ಇದರಿಂದಾಗಿ ಬಡವರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆಹರಿಸಿಕೊಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿದ್ದ ಬಡಾವಣೆ ನಿವಾಸಿ ಬಿ.ಡಿ.ಹೇಮಾವತಿ ಮಾತನಾಡಿ, ಬಡಾವಣೆಯಲ್ಲಿ ಮಂಜೂರಾದ ಕೆಲವು ಮನೆಗಳಲ್ಲಿ ವಾಸವಿಲ್ಲದಿದ್ದು, ಈ ಮನೆಗಳಲ್ಲಿ ಆಗಾಗ್ಗೆ ರಾತ್ರಿ ವೇಳೆ ಯಾರೋ ಅಪರಿಚಿತರು ಬಂದು ತಂಗುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಸಂಬAಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಡಾವಣೆಯಲ್ಲಿರುವ ನೀರಿನ ಟ್ಯಾಂಕ್ ಈಗಾಗಲೇ ಶಿಥಿಲಗೊಂಡಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆಯೆಂದು ಹೇಳಿದರು.
ಗೋಷ್ಠಿಯಲ್ಲಿ ನಿವಾಸಿಗಳಾದ ಕೆ. ದೀಪಿಕಾ, ಟಿ.ವಿ.ನಿರ್ಮಲ, ಕೆ.ಸಿ.ನಿರ್ಮಲ, ಎಂ.ಎನ್. ಬೇಬಿ ಇದ್ದರು.