ಮಾಳೆಯAಡ ಅಶೋಕ್ ಪೂವಯ್ಯ

ನಾಪೋಕ್ಲು, ನ. ೨೩: ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಯುವ ಜನರಿಗೆ ವಿಪುಲ ಅವಕಾಶಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಬ್ಯಾಡ್ಮಿಂಟನ್ ಮಾಜಿ ರಾಜ್ಯ ಚಾಂಪಿಯನ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಾಳೆಯಂಡ ಅಶೋಕ್ ಪೂವಯ್ಯ ಹೇಳಿದರು.

ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ ಬಳಿಕ ಪಥಸಂಚಲನ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆಗೆ ಉತ್ತಮ ಅವಕಾಶವಿದೆ. ಈಚೆಗೆ ಭಾರತದ ಮಹಿಳಾ ಕ್ರಿಕೆಟ್ ತಂಡ ಚಾಂಪಿಯನ್ ಆಗಿದ್ದಾರೆ. ಇದು ಬಾಲಕಿಯರಿಗೆ ಸ್ಪೂರ್ತಿಯಾಗಲಿದೆ ಎಂದರು.

ಅಂಕುರ್ ಪಬ್ಲಿಕ್ ಶಾಲೆಯ ವ್ಯವಸ್ಥಾಪಕಿ ಕೇಟೋಳಿರ ರತ್ನ ಚರ್ಮಣ್ಣ ಮಾತನಾಡಿ ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು.ಶಾಲೆಯಲ್ಲಿ ಕೇವಲ ಪಠ್ಯ ವಿಚಾರಕ್ಕೆ ಮಾತ್ರ ಆದ್ಯತೆ ನೀಡುತ್ತಿಲ್ಲ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸಂಗೀತ, ನೃತ್ಯ, ಕ್ರೀಡೆ, ಅಬಾಕಸ್, ಕರಾಟೆ ಸೇರಿದಂತೆ ವಿವಿಧ ಕಲಾ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಸಿಬಿಎಸ್ಸಿ ಪಠ್ಯಕ್ರಮ ಬೋಧಿಸುವ ಜಿಲ್ಲೆಯ ಏಳು ಶಾಲೆಗಳ ಸಹೋದಯ ವತಿಯಿಂದ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ. ಈ ಬಾರಿ ಅಂಕುರ್ ಶಾಲಾ ವತಿಯಿಂದ ಥ್ರೋಬಾಲ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಅದರಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.. ಮುಖ್ಯ ಅತಿಥಿ ಮಾಳೆಯಂಡ ಅಶೋಕ್ ಪೂವಯ್ಯ ಅವರ ಹುಟ್ಟು ಹಬ್ಬದ ದಿನವಾದ ಕಾರಣ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.

ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಪೋಷಕರಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.

ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೋಪಣ್ಣ ಸ್ವಾಗತಿಸಿ,. ಶಿಕ್ಷಕಿಯರಾದ ಆಶಾ ಬೋಪಣ್ಣ, ಕನ್ನಿಕ ನಿರೂಪಿಸಿದರು, ಅನನ್ಯ ಅಯ್ಯಪ್ಪ ಮುಖ್ಯ ಅತಿಥಿಯನ್ನು ಪರಿಚಯಿಸಿದರು, ಲಾಲು ನಂಜಪ್ಪ ಹಾಗೂ ದೀಪಿಕಾ, ವಿಪಿನ್ ಸುಬ್ಬಯ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿನಿ ಅನನ್ಯ ಅಯ್ಯಪ್ಪ ವಂದಿಸಿದರು.