ಮಡಿಕೇರಿ, ನ. ೨೨ : ಒಂಬತ್ತು ವರ್ಷ ಪ್ರಾಯದ ಬಾಲಕನೋರ್ವನನ್ನು ಕಳೆದ ರಾತ್ರಿ ೮ ಗಂಟೆ ಸಮಯದಲ್ಲಿ ಕಾರು ಒಂದರಲ್ಲಿ ಆಗಮಿಸಿದ ಅಪರಿಚಿತರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ದೂರೊಂದು ಮಡಿಕೇರಿ ನಗರ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಪ್ರಸಂಗ ನಡೆದಿದೆ. ನಗರದ ಗಣಪತಿ ಬೀದಿಯಿಂದ ರಾತ್ರಿ ೮ ಗಂಟೆ ಸುಮಾರಿಗೆ ೧೧೨ಕ್ಕೆ ಬಾಲಕನನ್ನು ಕಾರಿನಲ್ಲಿ ಅಪಹರಿಸುವ ಯತ್ನ ನಡೆದಿದೆ ಎಂಬ ದೂರು ಬಂದಿದ್ದು ಇದರಂತೆ ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ತಕ್ಷಣ ಮಡಿಕೇರಿ ಡಿವೈಎಸ್ಪಿ ಸೂರಜ್, ನಗರ ವೃತ್ತ ನಿರೀಕ್ಷಕ ರಾಜು, ಪಿಎಸ್ಐ ಅನ್ನಪೂರ್ಣ ಸೇರಿದಂತೆ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದರ ಬಗ್ಗೆ ಬಾಲಕನ ಮನೆಯವರ ಕಡೆಯಿಂದಲೂ ರಾತ್ರಿ ೧೦ ಗಂಟೆ ಸುಮಾರಿಗೆ ಠಾಣೆಗೆ ದೂರು ಬಂದಿದೆ. ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದಿದ್ದು, ಈ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿಯೊAದಕ್ಕೆ ಮೊಸರು ತರಲೆಂದು ತೆರಳಿ ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ಬಂದವರು ಕೈ ಹಿಡಿದು ಎಳೆದಿದ್ದಾರೆ ಎಂಬುದು ದೂರಿನ ಸಾರಾಂಶ. ಇದು ಪೊಲೀಸರಿಗೆ ಇಕ್ಕಟ್ಟಿನ ಸನ್ನಿವೇಶವನ್ನು ತಂದಿತ್ತು. ಈ ಮನೆ ಸನಿಹದ ಸಿಸಿಟಿವಿಗಳನ್ನು ರಾತ್ರಿ ಪರಿಶೀಲಿಸಿದಾಗ ಅಂತಹ ಕೃತ್ಯ ನಡೆದ ಬಗ್ಗೆ ಮಾಹಿತಿ ಲಭಿಸಲಿಲ್ಲ. ಆದರೂ ರಾತ್ರಿಯಿಡೀ ಪೊಲೀಸ್ ತಂಡ ನಿದ್ದೆಗೆಟ್ಟು ಕಾರ್ಯಾಚರಣೆ ನಡೆಸಬೇಕಾಯಿತು. ಇಂದು ಬೆಳಿಗ್ಗೆ ಮತ್ತೆ ಕೆಲವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ಸಂದರ್ಭ ಇದು ತಪ್ಪು ಕಲ್ಪನೆಯಿಂದಾಗಿ ಬಾಲಕ ಕಿಡ್ನಾಪ್ ಯತ್ನ ಎಂದು ಹೇಳಿರುವುದು ದೃಢಪಟ್ಟಿದೆ. ಈ ಮನೆಯ ಬಳಿ ಯುಜಿಡಿ ಕಾಮಗಾರಿಗೆಂದು ಗುಂಡಿ ತೆಗೆಯಲಾಗಿದ್ದು, ಅಲ್ಲಿ ಹಂಪ್ನ ಮಾದರಿಯಲ್ಲಿ ಪರಿಸ್ಥಿತಿ ಏರ್ಪಟ್ಟಿದೆ. ಈ ಸ್ಥಳದಲ್ಲಿ ಕಾರು ನಿಧಾನಗತಿಯಲ್ಲಿ ಚಾಲನೆಗೊಂಡಿದ್ದು ಚಾಲಕ ಸೀದಾ ಸಾಗಿದ್ದಾನೆ. ಕೈಹಿಡಿದು ಎಳೆಯುವ ಯಾವುದೇ ಕೃತ್ಯ ನಡೆದಿರಲಿಲ್ಲ ಎಂಬದು ಅರಿವಾಗಿದೆ. ಕಾರು ನಿಧಾನಗತಿಯಲ್ಲಿ ಹಂಪ್ ಬಳಿ ಸಾಗಿದ್ದೇ ಇದಕ್ಕೆ ಕಾರಣದ ರೀತಿ ಕಂಡುಬAದಿತ್ತು. ಇದರಿಂದ ಪೊಲೀಸರು ನಿಟ್ಟುಸಿರುಬಿಟ್ಟರೂ ರಾತ್ರಿಯಿಂದ ಬಸವಳಿಯಬೇಕಾಗಿತ್ತು. ಈ ಬಗ್ಗೆ ಮನೆಯವರು ಸೇರಿದಂತೆ ಬಾಲಕನ ಹೇಳಿಕೆಯನ್ನು ಪಡೆಯುವ ಮೂಲಕ ಪ್ರಕರಣ ಮುಗಿದಿದೆ.