ಗೋಣಿಕೊಪ್ಪಲು ನ.೨೨ : ‘ಕೈಗ್’ ಹಾಕಿ ಉತ್ಸವಕ್ಕೆ ಯುವಕರು ಮುಂದೆ ಬಂದಿರುವುದು ಶ್ಲಾಘನೀಯವಾಗಿದ್ದು, ಹಾಕಿ ಕ್ರೀಡೆಯಿಂದ ಯುವ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶ ಹೆಚ್ಚಾಗಲಿದೆ ಎಂದು ವೀರಾಜಪೇಟೆ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹೇಳಿದರು.
ಗೋಣಿಕೊಪ್ಪಲುವಿನ ಅಂತೂರ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ‘ಕೈಗ್’ ಹಾಕಿ - ೨೦೨೫ ರ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕ್ರೀಡೆಗಳು ನಿರಂತರವಾಗಿ ನಡೆಯಬೇಕು, ಇದರಿಂದ ಯುವ ಸಮುದಾಯ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದರು.
ಡಿ.೧೬ ರಿಂದ ೨೦ ರವರೆಗೆ ಪೊನ್ನಂಪೇಟೆ ಟರ್ಪ್ ಮೈದಾನದಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ೧೬ ತಂಡಗಳು ಭಾಗವಹಿಸಲಿವೆ. ಹಾಕಿ ಕೂರ್ಗ್, ಹಾಕಿ ಕರ್ನಾಟಕ ಸಹಯೋಗದೊಂದಿಗೆ ನಡೆಯುವ ಪಂದ್ಯಾವಳಿಯಲ್ಲಿ ಕೂರ್ಗ್ ಚಾಲೆಂಜರ್ ಪಂದ್ಯಾವಳಿ ನಡೆಸಲು ಮುಂದೆ ಬಂದಿದೆ. ಪಂದ್ಯಾವಳಿಯಲ್ಲಿ ಕೊಡಗು ಲೀಗ್ ಅರ್ಹತೆ ಪಡೆದಿರುವ ೧೬ ತಂಡಗಳು ಭಾಗವಹಿಸಲಿವೆ.
‘ಕೂರ್ಗ್ ಚಾಲೆಂಜರ್’ ನ ಸ್ಥಾಪಕರಾದ ಪಟ್ರಂಗಡ ಶ್ರೀಮಂತ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ‘ಕೈಗ್’ ಸ್ಪೋರ್ಟ್ಸ್ ಫೌಂಡೇಷನ್‌ನ ಮುಖ್ಯಸ್ಥರಾದ ಕುಟ್ಟಂಡ ಸುದಿನ್ ಮಂದಣ್ಣ ನಿ. ಕರ್ನಲ್ ಒಲಿಂಪಿಯನ್ ಬಾಳೆಯಡ ಸುಬ್ರಮಣಿ, ಕೂರ್ಗ್ ಚಾಲೆಂಜರ್ ನ ಗುಮ್ಮಟೀರ ಮುತ್ತಣ್ಣ, ಗುಮ್ಮಟೀರ ವಿವೇಕ್, ಪೊನ್ನಿಮಾಡ ಲೋಕೇಶ್, ಕುಂಚೆಟ್ಟಿರ ಪ್ರಥ್ವಿ ಅಯ್ಯಮ್ಮ, ತುದಿಮಾಡ ಲೋಕೇಶ್ ಕುಟ್ಟಪ್ಪ, ಕೈಗ್ ಸಂಸ್ಥೆಯ ಕುಂಡ್ಯೋಳAಡ ಶಶಿ ಮೇದಪ್ಪ, ಸುಭಾಷ್ ಚಂಗಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೂರ್ಗ್ ಚಾಲೆಂಜರ್ ನ ಗುಮ್ಮಟೀರ ಮುತ್ತಣ್ಣ ಸ್ವಾಗತಿಸಿ, ಹಾಕಿ ವೀಕ್ಷಕ ವಿವರಣೆಗಾರ ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ನಿರೂಪಿಸಿ, ವಂದಿಸಿದರು.
- ಹೆಚ್.ಕೆ.ಜಗದೀಶ್