ಸಿದ್ದಾಪುರ, ನ. ೨೨: ಹುಲಿ ದಾಳಿ ನಡೆಸಿ ಬೀಡಾಡಿ ಹಸುವನ್ನು ಕೊಂದುಹಾಕಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮಠ ಸಮೀಪ ನಡೆದಿದೆ.
ಬಾಡಗ ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಮೇಯುತ್ತಿದ್ದ ಬಿಡಾಡಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಭಾಗದ ಕಾಫಿ ತೋಟಗಳಲ್ಲಿ ಹಲವಾರು ಬೀಡಾಡಿ ಜಾನುವಾರುಗಳು ಸುತ್ತಾಡುತ್ತಿದ್ದು ಹುಲಿ ಈ ಹಿಂದೆ ಕೂಡ ಕಾಫಿ ತೋಟಗಳಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿತ್ತು.
ಖಾಸಗಿ ಸಂಸ್ಥೆಯ ತೋಟದ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಹುಲಿಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಕಳೆದೆರಡು ದಿನಗಳಿಂದ ಬಾಡಗ ಬಾಣಂಗಾಲ ಗ್ರಾಮದ ಮಠ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ರಾತ್ರಿವರೆಗೂ ಕಾರ್ಯಾಚರಣೆಯನ್ನು ನಡೆಸಲಾಯಿತು.
ಈ ಹಿಂದೆಯೂ ಮಠ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಬೆಲೆಬಾಳುವ ಎರಡು ಹಸುಗಳನ್ನು ಹುಲಿಯು ಕೊಂದುಹಾಕಿದ್ದ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿಯನ್ನು ಕಾಡಿಗಟ್ಟಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.