ಮಡಿಕೇರಿ, ನ. ೨೨: ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಿದ್ದು, ಜನವರಿಯಲ್ಲಿ ಇಂದಿರಾ ಆಹಾರ ಕಿಟ್ ಯೋಜನೆಯನ್ನು ಸರಕಾರ ಜಾರಿ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಸುಳಿವು ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಜನವರಿಯಿಂದ ಅನ್ನಭಾಗ್ಯದಲ್ಲಿ ಕೆಲ ಬದಲಾವಣೆ ತಂದು ಹೆಚ್ಚಿನ ಪ್ರಯೋಜನ ನೀಡಲು ಕ್ಯಾಬಿನೆಟ್ ತೀರ್ಮಾನಿಸಿದೆ. ಇಂದಿರಾ ಕಿಟ್ ಮೂಲಕ ಹೆಚ್ಚಿನ ಆಹಾರ ಉತ್ಪನ್ನ ವಿತರಿಸಲಾಗುವುದು. ಈ ಬಗ್ಗೆ ಸರಕಾರ ಅಧಿಕೃತವಾಗಿ ಘೋಷಿಸಲಿದೆ. ನಾನು ಈಗಾಲೇ ಈ ಬಗ್ಗೆ ವಿವರವಾಗಿ ಹೇಳಲಾರೆ ಎಂದು ತಿಳಿಸುವ ಮೂಲಕ ಇಂದಿರಾ ಕಿಟ್ ಯೋಜನೆಯಿಂದ ಹೆಚ್ಚುವರಿ ಅಗತ್ಯ ಆಹಾರ ಉತ್ಪನ್ನಗಳು ಫಲಾನುಭವಿಗಳಿಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಪೂರ್ವ ಗ್ಯಾರಂಟಿ ಕಾರ್ಡ್ಗಳನ್ನು ನೀಡಿ ಯೋಜನೆಯ ಬಗ್ಗೆ ವಾಗ್ದಾನ ನೀಡಲಾಗಿತ್ತು. ಅದರಂತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಘೋಷಣೆಗಳನ್ನು ಅನುಷ್ಠಾನ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಚುನಾವಣೆ ಪೂರ್ವ ೬೦೦ ಭರವಸೆಯನ್ನು ನೀಡಿತ್ತು. ಆದರೆ, ಈಡೇರಿಸಿದ್ದು ಮಾತ್ರ ಬೆರಳೆಣಿಕೆ. ಜಾರಿ ಮಾಡುವ ಮುನ್ನ ವಿರೋಧ ಪಕ್ಷಗಳು ಯೋಜನೆಗಳ ಕುರಿತು ಟೀಕೆ ಮಾಡಿದ್ದವು. ಜಾರಿ ಸಾಧ್ಯವಿಲ್ಲ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಅವರ ಮಾತುಗಳನ್ನು ಕಾಂಗ್ರೆಸ್ ಸುಳ್ಳು ಮಾಡಿ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ಅಗತ್ಯವಿದ್ದ ರೂ. ೫೫ ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿ ಕೈ ತಲುಪುವಂತೆ ಮಾಡಿದೆ ಎಂದರು.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಯೋಜನೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಮೂಲಕ ೬೦೦ ಕೋಟಿ ಮಹಿಳೆಯರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ದಿನನಿತ್ಯ ೧೬ ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಬಸ್ ಮಾರ್ಗ ೧೦೦ಕ್ಕೆ ಹೆಚ್ಚಳ ಮಾಡಲಾಗಿದೆ. ಇಂತಹ ಯೋಜನೆ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ. ಗ್ಯಾರಂಟಿಯಿAದಾದ ಅನುಕೂಲತೆಯ ಬಗ್ಗೆ ಜನರು ಧೈರ್ಯದಿಂದ ಹೇಳಬೇಕು. ಎಲ್ಲಾ ಧರ್ಮ ಜಾತಿಯವರಿಗೂ೪ ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಜಾತಿಯವರಿಗೂ ಯೋಜನೆಯ ಲಾಭ ದೊರೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ಉಚಿತ ಯೋಜನೆಯನ್ನು ನೀಡಲಾಗುತ್ತಿಲ್ಲ. ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದರು.
ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ : ರೇವಣ್ಣ
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ ಭಾರತದ ಯಾವ ರಾಜ್ಯದಲ್ಲೂ ಈ ರೀತಿಯ ಯೋಜನೆಯನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಮಹಿಳೆಯರ ಆರ್ಥಿಕ ಸಬಲತೆ ವೃದ್ಧಿಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗಲೆಲ್ಲ ಜನಪರ ಆಡಳಿತ ನೀಡಿ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತದೆ. ಕೇಂದ್ರ ಸರಕಾರ ಹೇಳಿದ್ದ ೨ ಕೋಟಿ ಉದ್ಯೋಗ ಸೃಷಿ ಇದುವರೆಗೂ ಆಗಿಲ್ಲ. ಭಾಷಣ ಮಾಡಿದರೆ ಜನರ ಹೊಟ್ಟೆ ತುಂಬುವುದಿಲ್ಲ. ಕಾರ್ಯದ ಮೂಲಕ ಜನರ ಬಾಳಿಗೆ ಸರಕಾರಗಳು ಬೆಳಕಾಗಬೇಕು. ಸರ್ವರಿಗೂ ಸಮಪಾಲು, ಸಮಬಾಳು ಘೋಷವಾಕ್ಯ ರಾಜ್ಯದಲ್ಲಿ ಯಶಸ್ವಿಯಾಗಿದೆ ಎಂದರು.
ನಿರ್ದಿಷ್ಟ ಮೊತ್ತದ ಜಿಎಸ್ಟಿ ಹಾಗೂ ತೆರಿಗೆ ಪಾವತಿದರ ಮಹಿಳೆಯರಿಗೂ ಗೃಹಲಕ್ಷಿö್ಮ ಯೋಜನೆ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಮೃತಪಟ್ಟ ಮಹಿಳೆಯರಿಗೆ ಹಣ ಜಮೆಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಮಾಜಿಕ ನ್ಯಾಯದಡಿ ಯೋಜನೆ ಜಾರಿ - ಪೊನ್ನಣ್ಣ
ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸಾಮಾಜಿಕ ನ್ಯಾಯದಡಿ ಯೋಜನೆ ಜನಪರವಾಗಿ ಜಾರಿಯಾಗಿದೆ. ಯೋಜನೆಗಳು ನೇರವಾಗಿ ಫಲಾನುಭವಿ ಕೈ ಸೇರುತ್ತಿದೆ. ಬಡವರ ಪರ ಇರುವ ಕಾರ್ಯಕ್ರಮವನ್ನು ರಾಜಕೀಯವಾಗಿ ಕೆಲವರು ವಿರೋಧಿಸಬಹುದು. ಆದರೆ, ಸರಕಾರ ಬಡವರ ಪರ ನಿಂತಿದೆ. ಇವು ಸಾಧಾರಣ ಯೋಜನೆಗಳಲ್ಲ. ನಮ್ಮನ್ನು ಟೀಕೆ ಮಾಡುತ್ತಿದ್ದ ಪಕ್ಷಗಳು ಇತರ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಯನ್ನು ಅನುಸರಿಸುತ್ತಿವೆ ಎಂದರು.
ವಸತಿ ಗ್ಯಾರಂಟಿ ಬೇಕಿದೆ - ಮಂತರ್
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಯೋಜನೆಯಿಂದ ಬಂದ ಹಣವನ್ನು ಸಂಗ್ರಹಿಸಿ ಅಗತ್ಯತೆಗಳನ್ನು ಈಡೇರಿಸಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಮಹಿಳೆಯರು ಸ್ವಾವಲಂಬಿಯಾಗಬೆAಕಬುದು ಮಾತಿನಲ್ಲಿ ಅಲ್ಲ. ಕ್ರಿಯೆಯಲ್ಲಿ ಆಗಬೇಕು. ಗ್ಯಾರಂಟಿಯಿAದ ಸಾಮಾಜಿಕ ಬೆಂಬಲ ಜನರಿಗೆ ದೊರೆಯುತ್ತಿದೆ. ಬುಡಕಟ್ಟು ಮಹಿಳೆಯರಿಗೆ ಆಧಾರ್, ಪಡಿತರ ಕಾರ್ಡ್ ಇಲ್ಲದ ಕಾರಣ ಯೋಜನೆಯಿಂದ ವಂಚಿತರಾಗಿದ್ದಾರೆ. ಶಿಬಿರ ಕೈಗೊಂಡು ದಾಖಲೆ ಒದಗಿಸಿ ಯೋಜನೆ ತಲುಪಿಸುವ ಕೆಲಸವಾಗಬೇಕು. ವಸತಿ ರಹಿತರಿಗೆ ವಸತಿ ನೀಡುವ ಗ್ಯಾರಂಟಿ ಸರಕಾರ ನೀಡಬೇಕಾಗಿದೆ ಎಂದರು.
ಕೇAದ್ರದ ವಾಗ್ದಾನ ಈಡೇರಿಲ್ಲ - ಪುಷ್ಪ ಅಮರನಾಥ್
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ದೇಶದ ಪ್ರತಿಯೊಬ್ಬರ ಖಾತೆಗೆ ರೂ. ೧೫ ಲಕ್ಷ ಹಣವನ್ನು ಜಮೆ ಮಾಡಲಾಗುವುದು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಹಣ ನೀಡಿಲ್ಲ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಇಳಿಕೆ ವಾಗ್ದಾನವೂ ಈಡೇರಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯವನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ಬೇರೆ ಯಾವುದೇ ‘ಮಾಡೆಲ್’ ಇಲ್ಲ ಕರ್ನಾಟಕ ಮಾಡೆಲ್ ಮಾತ್ರ ಎಂದು ಹೇಳಿದರು.
ಆರ್ಥಿಕ ಪ್ರಗತಿಗೆ ಗ್ಯಾರಂಟಿ ಕಾರಣ : ಮೆಹರೋಜ್ ಖಾನ್
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ, ಸಮೃದ್ಧ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ ಹಸಿವು ಮುಕ್ತ, ಉದ್ಯೋಗ ಸೃಷ್ಟಿ, ವಸತಿ ಸೌಲಭ್ಯ ನೀಡುವುದು ಸರಕಾರ ಧ್ಯೇಯವಾಗಿದೆ. ೨ ಲಕ್ಷ ಸಾವಿರ ಕೋಟಿ ಹಣವನ್ನು ರಾಜ್ಯದ ಅಭಿವೃದ್ಧಿಗೆ ಸರಕಾರ ನೀಡಿದೆ. ೯೦೦ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಮುಂದಾಗಿದೆ. ರಾಜ್ಯದಲ್ಲಿ ೩೬ ಸಾವಿರ ಮನೆ ನೀಡಿದ್ದೇವೆ. ೪೪ ಸಾವಿರ ಮನೆ ಮುಂದಿನ ದಿನಗಳಲ್ಲಿ ನೀಡಲಾಗುವುದು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಪ್ರಮಾಣ ಇಳಿಕೆಯಾಗಿದೆ. ಮಹಿಳೆಯರ ಉದ್ಯಮಶೀಲತೆ ಶೇ ೧೨ ರಿಂದ ೨೨ಕ್ಕೆ ಏರಿಕೆಯಾಗಿದೆ. ತಲಾದಾಯ, ಜಿಎಸ್.ಟಿ.ಯಲ್ಲಿ ಅಗ್ರಸ್ಥಾನÀದಲ್ಲಿರಲು ಗ್ಯಾರಂಟಿ ಕಾರಣವಾಗಿದೆ ಎಂದು ಬಣ್ಣಿಸಿದರು.
ಜಿಲ್ಲೆಯಲ್ಲಿ ಶೇ ೯೯ ಅನುಷ್ಠಾನ : ಧರ್ಮಜ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪಂಚ ಗ್ಯಾರಂಟಿ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸಿದೆ. ಜಿಲ್ಲೆಯಲ್ಲಿ ಯೋಜನೆ ಶೇ ೯೯ರಷ್ಟು ಅನುಷ್ಠಾನವಾಗಿದೆ. ಶಕ್ತಿ ಯೋಜನೆಯ ಲಾಭವನ್ನು ೧.೪೫ ಕೋಟಿ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ೬೧ ಕೋಟಿ ಮೊತ್ತ ನಿಗಮಕ್ಕೆ ಭರಿಸಲಾಗಿದೆ. ಗೃಹಲಕ್ಷಿö್ಮ ಮೂಲಕ ೧.೧೮ ಕೋಟಿ ಫಲಾನುಭವಿಗಳಿಗೆ ಒಟ್ಟು ೪೮ ಕೋಟಿ ಹಣ ಜಮೆ ಆಗಿದೆ. ಗೃಹಜ್ಯೋತಿಯಡಿ ೧.೪೭ ಲಕ್ಷ ಫಲಾನುಭವಿಗಳಿದ್ದು, ೧೪೮ ಕೋಟಿ ಜಮೆ ಮಾಡಲಾಗಿದೆ. ೧೫೮೫ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ತಲುಪಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಗ್ಯಾರಂಟಿ ಯೋಜನೆ ಕುರಿತು ವಿಚಾರ ಮಂಡಿಸಿದ ಮುತ್ತುರಾಜು, ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಆರೋಪವಿದೆ. ಆದರೆ, ಇದರಿಂದ ರಾಜ್ಯದ ಅಭಿವೃದ್ಧಿಯಾಗುತ್ತಿದೆ. ಗ್ಯಾರಂಟಿ ಯೋಜನೆಯ ಬಗ್ಗೆ ದೊಡ್ಡ ಸಂಸ್ಥೆಗಳ ಅಧ್ಯಯನದಲ್ಲೂ ಇದು ಸಾಬೀತಾಗಿದೆ. ಶಕ್ತಿ ಯೋಜನೆಯಿಂದ ೨ ಕೋಟಿ ಮಹಿಳೆಯರಿಗೆ ಪ್ರಯೋಜನವಾಗಿದೆ. ಗೃಹಲಕ್ಷಿö್ಮಯಿಂದ ೧.೨೮ ಕೋಟಿ ಮಹಿಳೆಯರಿಗೆ ೨ ಸಾವಿರ ಹಣ. ಅನ್ನಭಾಗ್ಯದಿಂದ ಹಸಿವು ಮುಕ್ತ ರಾಜ್ಯವಾಗಿದೆ. ಭಾರತದ ತಲಾದಾಯ ರೂ. ೧.೧೪ ಲಕ್ಷವಿದೆ. ಕರ್ನಾಟಕದಲ್ಲಿ ೨.೦೪ ಲಕ್ಷ ಹೆಚ್ಚಾಗಿದೆ. ಜಿಎಸ್.ಟಿ. ಬೆಳವಣಿಗೆ ದರ ಶೇ. ೪೧.೬ ರಷ್ಟಾಗಿದೆ ಎಂದರು.
ಗ್ಯಾರಂಟಿ ನಂತರ ಸರಕಾರಿ ೭ನೇ ವೇತನ ಆಯೋಗದಡಿ ಸಂಬಳ ಹೆಚ್ಚಳ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ. ೫,೮೦೦ ಬಸ್ಗಳನ್ನು ಖರೀದಿಸಲಾಗಿದೆ. ಸಾರಿಗೆ ನಿಗಮ ಲಾಭದಲ್ಲಿರಲು ಗ್ಯಾರಂಟಿ ಯೋಜನೆ ಕಾರಣ. ಕೇಂದ್ರದ ಸಾಲದಲ್ಲಿ ಶೇ ೪.೪ ವಿತ್ತೀಯ ಕೊರತೆಯಿದೆ. ರಾಜ್ಯದ ಸಾಲದ ಕೊರತೆ ಶೇ ೨.೯ ಮಾತ್ರ ಇದೆ. ಮಹಿಳೆಯರು ಮನೆಗಾಗಿ ದುಡಿದಿದ್ದಾರೆ. ಅವರು ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕಲು ಗೃಹಲಕ್ಷಿö್ಮ ಯೋಜನೆ ಕಾರಣವಾಗಿದೆ. ನ್ಯೂಯಾರ್ಕ್ನಲ್ಲಿಯೂ ಉಚಿತ ಬಸ್ ವ್ಯವಸ್ಥೆ ಇದೆ. ತಮಿಳುನಾಡಿನಲ್ಲಿ ಅತೀ ಹೆಚ್ಚು ಉಚಿತ ಯೋಜನೆ ಹಲವು ವರ್ಷಗಳಿಂದ ಇದೆ. ಆ ರಾಜ್ಯ ದಿವಾಳಿಯಾಗಿದೆಯೆ? ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಪ್ರಾಧಿಕಾರದ ತಾಲೂಕು ಅಧ್ಯಕ್ಷರುಗಳಾದ ವಿ.ಪಿ. ಶಶಿಧರ್, ಪಿ.ವಿ. ಜಾನ್ಸನ್, ಕಾಳಿಮಾಡ ಪ್ರಶಾಂತ್, ಕಾಂತರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.