ಸೋಮವಾರಪೇಟೆ, ನ. ೨೧: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ, ಮುಂಬರುವ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಪಕ್ಷ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಚರ್ಚೆಯಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಉಪಸ್ಥಿತಿಯಲ್ಲಿ, ನಗರ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಹೆಚ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆ, ವಾರ್ಡ್ ಅಧ್ಯಕ್ಷರುಗಳ ನೇಮಕ ಹಾಗೂ ಪ್ರಚಾರ ಸಮಿತಿಗೆ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು.
ಸಮಿತಿಯ ಗೌರವ ಸಲಹೆಗಾರ ಹೆಚ್.ಸಿ. ನಾಗೇಶ್ ಮಾತನಾಡಿ, ಕೆಲವೇ ತಿಂಗಳಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಈ ಬಾರಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶೀಲಾ ಡಿಸೋಜಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಜೇಕಬ್ ಸೈಮನ್, ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಎ.ಎಸ್. ಭುವನೇಶ್, ಪ್ರಚಾರ ಸಮಿತಿಯ ಎ.ಪಿ. ವೀರರಾಜು, ಎಂ.ಎ. ರುಬೀನಾ, ಪದಾಧಿಕಾರಿಗಳಾದ ಎಂ.ಬಿ. ಜಮೀರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ ಇದ್ದರು.