ವೀರಾಜಪೇಟೆ, ನ. ೨೧: ವೀರಾಜಪೇಟೆ ಸಮೀಪದ ಬಿಳುಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂವಿಧಾನದ ಪೂರ್ವ ಪೀಠಿಕೆಯನ್ನು ಹೇಳಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆಯನ್ನು ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸಂತೆಯಲ್ಲಿ ಪಾಲ್ಗೊಂಡು, ಆಹಾರದ ಶುಚಿತ್ವ, ಮಹತ್ವ, ವ್ಯವಹಾರದ ಮೂಲ ಜ್ಞಾನವನ್ನು ಅರಿತುಕೊಂಡರು.
ಮಧ್ಯಾಹ್ನದ ಊಟದ ನಂತರ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಚಮಚದಲ್ಲಿ ನಿಂಬೆಹಣ್ಣನ್ನಿಟ್ಟು ಓಟ, ಪಾಯಿಸನ್ ಬಾಲ್, ಮ್ಯೂಸಿಕಲ್ ಚೇರ್, ಕಣ್ಣು ಕಟ್ಟಿ ಮಡಿಕೆ ಹೊಡೆಯುವುದು ಮುಂತಾದ ಹಲವು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಟದ ಬಳಿಕ ವಿದ್ಯಾರ್ಥಿಗಳು ಜಾನಪದ ನೃತ್ಯ, ಫ್ಯಾಶನ್ ಶೋ, ಗೀತಗಾಯನ, ಕವ್ವಾಲಿ ಮುಂತಾದ ಸಾಂಸ್ಕöÈತಿಕ ಕಾರ್ಯಕ್ರಮಗಳಿಂದ ಎಲ್ಲರನ್ನು ರಂಜಿಸಿದರು.
ವಿಷಯವಾರು ಶಿಕ್ಷಕರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರೊಂದಿಗೆ ಚರ್ಚಿಸಲಾಯಿತು.
ಮಕ್ಕಳ ಸಂತೆಯನ್ನು ಉತ್ತಮವಾಗಿ ನಿರ್ವಹಿಸಿದ ಹಾಗೂ ಅತೀ ಹೆಚ್ಚು ಲಾಭ ಗಳಿಸಿದ ತಂಡಕ್ಕೆ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ ಅನಿತಾ ಹಾಗೂ ಸದಸ್ಯರು ಮತ್ತು ಮುಖ್ಯ ಶಿಕ್ಷಕರಾದ ಡಾ. ರವಿ ಆರ್., ಹಿರಿಯ ಶಿಕ್ಷಕಿ ಅರುಣ್ ಆ್ಯನ್ಸಿ ಡಿಸೋಜ, ಸಹ ಶಿಕ್ಷಕರಾದ ಲೀಲಾವತಿ ವಿ.ಕೆ., ಅನಿತ ಎಸ್.ಡಿ., ಲಿನ್ನಿ ಎಸ್.ಜಿ., ಸವಿತಾ ಮಹಾದೇವ ನಾಯಕ್, ರೂಪಾ ಕಡೇಮನಿ, ಭವ್ಯ ಹಾಜರಿದ್ದರು.