ಮಡಿಕೇರಿ, ನ. ೨೧: ಟಿಪ್ಪು ಜಯಂತಿ ಕಾರ್ಯಕ್ರಮದ ಕುರಿತಾಗಿ ಈ ಹಿಂದೆ ನಡೆದ ವಿಚಾರಗೋಷ್ಠಿಯೊಂದರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಆರೋಪದಂತೆ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ತಮ್ಮಯ್ಯ ಸೇರಿದಂತೆ ಹಲವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಮತ್ತೆ ಇದೀಗ ಮರು ಜೀವ ಬಂದಿದ್ದು, ಮತ್ತೆ ಸಮನ್ಸ್ ಜಾರಿಯಾಗಿದೆ.

೨೦೨೦ರಲ್ಲಿ ಗೋಣಿಕೊಪ್ಪದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರಜ್ಞಾಕಾವೇರಿ ಸಂಘಟನೆ ಮೂಲಕ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಸಂತೋಷ್ ತಮ್ಮಯ್ಯ, ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ, ರಾಬಟ್ ರೊಜಾರಿಯೋ ವಿರುದ್ಧವಾಗಿ ಧರ್ಮ ನಿಂದನೆಯ ಮಾತನ್ನಾಡಿರುವುದಾಗಿ ಆರೋಪಿಸಿ ಸಿದ್ದಾಪುರದ ವ್ಯಕ್ತಿಯೋರ್ವರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರಲ್ಲಿ ಸಂತೋಷ್ ತಮ್ಮಯ್ಯ ಪ್ರಮುಖ ಆರೋಪಿಯಾಗಿದ್ದರು. ಇವರನ್ನು ಆಗ ಬಂಧನಕ್ಕೂ ಒಳಪಡಿಸಿದ್ದು, ಜಾಮೀನು ದೊರೆತಿತ್ತು. ನಂತರದಲ್ಲಿ ಬಿ. ರಿಪೋರ್ಟ್ ಕೂಡ ಆಗಿತ್ತೆನ್ನಲಾಗಿದೆ. ಆದರೆ ಇದೀಗ ಈ ಬಗ್ಗೆ ಸಂತೋಷ್ ತಮ್ಮಯ್ಯಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು, ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಈ ಬಗ್ಗೆ “ಶಕ್ತಿ''ಯೊಂದಿಗೆ ಪ್ರತಿಕ್ರಿಯಿಸಿರುವ ಸಂತೋಷ್ ತಮ್ಮಯ್ಯ ಆ ಸಂದರ್ಭ ಸೆಕ್ಷನ್ ೨೯೫ (ಂ) ರಂತೆ ಪ್ರಕರಣ ದಾಖಲಾಗಿತ್ತು. ಇದೀಗ ಸೆಕ್ಷನ್ ೧೫೨ ರಂತೆ ಸಮನ್ಸ್ ಬಂದಿದ್ದು, ಅಚ್ಚರಿಯಾಗಿದೆ ಎಂದಿದ್ದಾರೆ. ಸರಕಾರ ಹಿಂದೂ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಮತ್ತೆ ತೆರೆಯಲಾಗಿದೆ ಎನ್ನಲಾಗಿದೆ.