ಸೋಮವಾರಪೇಟೆ,ನ.೨೧: ನೇರುಗಳಲೆ, ಕೂಡಿಗೆ ಗ್ರಾಮ ಪಂಚಾಯಿತಿಗಳ ಹಲವಾರು ಗ್ರಾಮಸ್ಥರ ಬಹು ಕಾಲದ ಬೇಡಿಕೆಯಾಗಿದ್ದ ಮಸಗೋಡು-ಕಣಿವೆ ಸಂಪರ್ಕ ರಸ್ತೆ ಉನ್ನತೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರು ಭೂಮಿಪೂಜೆ ನೆರವೇರಿಸಿದರು.
ರೂ. ೧೫ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದ್ದು, ಈ ರಸ್ತೆಗಾಗಿ ಸೋಮವಾರಪೇಟೆ ಪಟ್ಟಣದಲ್ಲಿ ಎತ್ತಿನಗಾಡಿಯೊಂದಿಗೆ ನೂರಾರು ಮಂದಿ ಗ್ರಾಮಸ್ಥರು ಭಾರೀ ಪ್ರತಿಭಟನೆಯನ್ನೇ ನಡೆಸಿದ್ದರು. ಇದಾದ ಕೆಲ ಸಮಯದ ನಂತರ ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿಯ ಮಸಗೋಡು ಗ್ರಾಮದಿಂದ ನೇಗಳ್ಳೆ ಗ್ರಾಮದವರೆಗೆ ನೂತನ ಡಾಂಬರು ರಸ್ತೆ ನಿರ್ಮಾಣವಾಗಿತ್ತು. ಉಳಿದಂತೆ ರಸ್ತೆ ತೀರಾ ಹದಗೆಟ್ಟಿತ್ತು. ವಾಹನ ಸಂಚಾರ ದುಸ್ತರವಾಗಿತ್ತು.
ಇದೀಗ ಮಸಗೋಡು, ಅರೆಯೂರು, ಹೊಸಳ್ಳಿ, ಕಣಿವೆ ಮಾರ್ಗದ ರಸ್ತೆಗೆ ೧೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅರೆಯೂರಿನಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಭಾಗಿಯಾಗಿ, ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಳಪೆ ಕಾಮಗಾರಿಯಾಗದಂತೆ ಇಂಜಿನಿಯರ್‌ಗಳು ನೋಡಿಕೊಳ್ಳಬೇಕು. ಕಳಪೆಯಾದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು. ರಸ್ತೆ ಕಾಮಗಾರಿ ಮರ‍್ನಾಲ್ಕು ದಿನಗಳಲ್ಲಿ ಪ್ರಾರಂಭವಾಗಲಿದೆ. ೧೦೦ ದಿನಗಳ ಒಳಗೆ ಕಾಮಗಾರಿ
ಮುಕ್ತಾಯಗೊಳಿಸಬೇಕಾಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಗ್ರಾಮಗಳ ರಸ್ತೆ ಕಾಮಗಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ೧೫ ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ನೀಡಿದೆ. ಗ್ರಾಮಸ್ಥರ ರಸ್ತೆ ಸಮಸ್ಯೆಯನ್ನು ಶಾಸಕರು ಅರ್ಥ ಮಾಡಿಕೊಂಡು ಅನುದಾನ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಕಳೆದ ೨೫ ವರ್ಷಗಳ ನಂತರ ಕೊಡಗಿನ ಜನತೆ ಕಾಂಗ್ರೆಸ್ ಶಾಸಕರಾದ ಡಾ.ಮಂತರ್‌ಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ಇಬ್ಬರು ಶಾಸಕರ ಬೇಡಿಕೆಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈಡೇರಿಸುತ್ತಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಿದೆ ಎಂದು ಶಾಸಕರುಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೊಡಗಿನ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ೧೦೦ ಕೋಟಿ ರೂ. ಗಳ ವಿಶೇಷ ಅನುದಾನ ನೀಡಿದ್ದಾರೆ ಎಂದರು.
ಚುನಾವಣೆ ಪೂರ್ವ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳಾದ ೫ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ದೇಶದಲ್ಲೇ ಮಾದರಿ ಯೋಜನೆಗಳಾಗಿದ್ದು ಬೇರೆ ರಾಜ್ಯಗಳಲ್ಲೂ ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಬಿಜೆಪಿ ಬಿಟ್ಟಿ ಯೋಜನೆಗಳೆಂದು ಅಪಪ್ರಚಾರ ಮಾಡುತ್ತಾ ಫಲಾನುಭವಿಗಳನ್ನು ಅವಮಾನ ಮಾಡುತ್ತಿರುವುದು ತಪ್ಪು ಎಂದು ಹೇಳಿದರು.
ರೈತರ ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯನ್ನು ಮುಖ್ಯಮಂತ್ರಿಗಳು, ಕಂದಾಯ ಮತ್ತು ಅರಣ್ಯ ಸಚಿವರಿಗೆ ಮನವರಿಕೆ ಮಾಡಿಕೊಡುವಲ್ಲಿ ಜಿಲ್ಲೆಯ ಶಾಸಕರುಗಳು ಯಶಸ್ವಿಯಾಗಿದ್ದಾರೆ. ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ರೈತರಿಗೆ ತೊಂದರೆಯಾಗದAತೆ ಸರ್ಕಾರ ನೋಡಿಕೊಳ್ಳಲಿದೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬಿದರು.
ಶಾಸಕರಾದ ಡಾ.ಮಂತರ್‌ಗೌಡ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರು ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ರಸ್ತೆಗಾಗಿ ಗ್ರಾಮಸ್ಥರು ಅನೇಕ ಬಾರಿ ಹೋರಾಟ ಮಾಡಿದ್ದರು. ಗ್ರಾಮಸ್ಥರಿಗೆ ರಸ್ತೆ ಮಾಡಿಕೊಡುವ ಭರವಸೆ ನೀಡಿದ್ದೆ; ಈಗ ೧೫ ಕೋಟಿ ರೂ.ಗಳ ಅನುದಾನ ಕೊಟ್ಟು ಮಾತು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ಇದೇ ರಸ್ತೆಯ ಸೇತುವೆ ನಿರ್ಮಾಣಕ್ಕೆ ೩.೫೦ ಕೋಟಿ ರೂ. ಅನುದಾನ ಒದಗಿಸಲಾಗುವುದು. ನೇಗಳ್ಳೆ ಗ್ರಾಮದ ರೈತರ ಹಲವು ದಶಕಗಳ ರಸ್ತೆ ಬೇಡಿಕೆಯಿದ್ದು, ರೂ. ೩೫ ಲಕ್ಷ ಅನುದಾನ ಕಲ್ಪಿಸಲಾಗಿದೆ. ಸೋಮವಾರಪೇಟೆ ತೋಳೂರುಶೆಟ್ಟಳ್ಳಿ, ಕೂತಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಬ್ಬಿಣ ಸೇತುವೆ ಕಾಮಗಾರಿ ಪ್ರಾರಂಭವಾಗಿದೆ. ಕ್ಷೇತ್ರದ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಬಿ.ಬಿ.ಸತೀಶ್, ಅರೆಯೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪಾಪಯ್ಯ, ಪ್ರಮುಖರಾದ ಕೆ.ಎಂ.ಲೋಕೇಶ್, ಎಸ್.ಎಂ.ಡಿಸಿಲ್ವಾ, ಎಚ್.ಆರ್.ಸುರೇಶ್, ಜನಾರ್ಧನ್, ಸಬಿತಾ ಚನ್ನಕೇಶವ, ಚಂದ್ರಿಕಾ ಕುಮಾರ್, ಜಲಜ ದಿನೇಶ್, ಅನಂತ್‌ಕುಮಾರ್, ಸುನಿಲ್ ಸೇರಿದಂತೆ ಇತರರು ಇದ್ದರು.