ಸಿದ್ದಾಪುರ ನ. ೨೧ : ಅನುಮತಿ ಇಲ್ಲದೆ ಉದ್ಯಾನವನದಲ್ಲಿ ಮರ ಕಡಿದ ಪ್ರಕರಣದಲ್ಲಿ ವ್ಯಕ್ತಿ ಓರ್ವನ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ಸೇತುವೆ ಬಳಿ ಮುಖ್ಯ ರಸ್ತೆಯ ಬದಿಯಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದಲೇ ಉದ್ಯಾನವನ ಪ್ರಾರಂಭಿಸಲಾಗಿತ್ತು. ಇದನ್ನು ಸ್ಥಳೀಯ ಜನ ಸೇವಾ ಸಮಿತಿಯವರು ಉಸ್ತುವಾರಿ ನೋಡಿಕೊಂಡು ಪ್ರಕೃತಿ ಉದ್ಯಾನ ಎಂದು ಹೆಸರಿಡಲಾಗಿತ್ತು. ಮರ-ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕಾವೇರಿ ಸೇತುವೆ ಬಳಿಯಿಂದ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯ ಹೆಸರಿನಲ್ಲಿ ಉದ್ಯಾನವನದ ಮೂರು ದೊಡ್ಡ ಮರಗಳನ್ನು ಕಡಿದು ನೆಲಸಮಗೊಳಿಸಲಾಗಿದೆ. ಹಲವಾರು ಮಂದಿ ವಾಯುವಿಹಾರಕ್ಕೆ ತೆರಳುವ ಸಮಯ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಹಿನ್ನಲೆಯಲ್ಲಿ ಉದ್ಯಾನವನದಲ್ಲಿ ನೆರಳು ನೀಡುತ್ತಿದ್ದ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೆ ಮರ ಕಡಿದ ಪ್ರಕರಣದಲ್ಲಿ ನೆಲ್ಲಿ ಹುದಿಕೇರಿ ಗ್ರಾಮದ ನಿವಾಸಿ ಲತೀಫ್ ಎಂಬಾತನ ವಿರುದ್ಧ ಪ್ರಕರಣದ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.