ಚೆಯ್ಯಂಡಾಣೆ, ನ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ಕೊಣಂಜಗೇರಿ ಪಾರಾಣೆಯ ಆಟದ ಮೈದಾನದಲ್ಲಿ ಶಾಸಕರ ಅನುದಾನದ ೨೦ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಪೆವಿಲಿಯನ್ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಲೋಕಾರ್ಪಣೆಗೊಳಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಕ್ರೀಡೆಯ ಪ್ರೋತ್ಸಾಹಕ್ಕೆ ಹಾಗೂ ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಲು ಪ್ರೇಕ್ಷಕರ ಅಗತ್ಯತೆ ತುಂಬಾ ಮುಖ್ಯ. ಕ್ರೀಡೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುಕೂಲವಾಗಲೆಂದು ಈ ಪೆವಿಲಿಯನ್ ಕಟ್ಟಡದ ನಿರ್ಮಾಣವಾಗಿದ್ದು, ಇದರ ಸದುಪಯೋಗವನ್ನು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕ್ಷೇತ್ರದಲ್ಲಿರುವ ಆಟದ ಮೈದಾನಗಳಿಗೆ ಹಾಗೂ ಕ್ರೀಡಾ ಅಭಿವೃದ್ಧಿಗೆ ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದು, ಇದರಲ್ಲಿ ಕ್ರೀಡಾ ತರಬೇತಿ ಕೇಂದ್ರ, ಕ್ರೀಡಾ ವಸತಿ ನಿಲಯಗಳ ನಿರ್ಮಾಣ ಹಾಗೂ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದಾಗಿ ಹೇಳಿದರು. ಇಂತಹ ಕ್ರೀಡಾಂಗಣಗಳು ಸ್ಥಳೀಯ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಕಾರಿಯಾಗಲಿದ್ದು ಎಲ್ಲರಿಗೂ ಒಳಿತಾಗಲಿ ಎಂದರು. ಬಳಿಕ ಗ್ರಾಮಾಂತರ ಕ್ರೀಡಾಕೂಟಕ್ಕೆ ಶುಭಕೋರಿದ ಶಾಸಕರು, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಯನ್ನು ಪೋಷಿಸಿ ಬೆಳೆಸುವುದಕ್ಕೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಬೊಳ್ಳಂಡ ಶರೀನ್, ಕಾಂಗ್ರೆಸ್ ವಲಯಾಧ್ಯಕ್ಷ ದಿಲೀಪ್, ನಾಪೋಕ್ಲು ಪ್ರಚಾರ ಸಮಿತಿಯ ಬಲ್ಯಾಟಂಡ ಕೌಶಿಕ್, ನಾಯಕಂಡ ಮುತ್ತಪ್ಪ, ಕ್ರೀಡಾ ಮಂಡಳಿ ಅಧ್ಯಕ್ಷರಾದ ಸಾಬ ದೇವಯ್ಯ, ಪಂಚಾಯಿತಿ ಅಧ್ಯಕ್ಷರಾದ ಪಾಡೆಯಂಡ ಕಟ್ಟಿ ಕುಶಾಲಪ್ಪ, ದತ್ತಿ ನಿಧಿ ಅಧ್ಯಕ್ಷ ದೀಪು ಚಂಗಪ್ಪ, ಕಾರ್ಯದರ್ಶಿ ರಾಜೇಶ್ ಮುದ್ದಪ್ಪ, ಸುರೇಶ್, ಮುತ್ತಪ್ಪ, ಅಜ್ಜಿಕುಟ್ಟಿರ ಗಿರೀಶ್, ಮನು, ಬಟ್ಟಕಾಳಂಡ ರಾಜ ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.