ಮಡಿಕೇರಿ, ನ.20: ಸಹಕಾರ ವೆಂದರೆ ಸಾಮೂಹಿಕ ನಂಬಿಕೆ, ಶ್ರಮ, ಶ್ರದ್ಧೆ ಹಾಗೂ ನ್ಯಾಯದ ಹಂಚಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೆಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸÀಮಾರೋಪ ಸಮಾರಂಭದ ಅಂಗವಾಗಿ ‘ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವಿನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು’ ದಿನಾಚರಣೆ ಹಾಗೂ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕೃಷಿ, ಕಾರ್ಖಾನೆ, ಹೈನುಗಾರಿಕೆ, ಗೃಹ ನಿರ್ಮಾಣ ಮುಂತಾದ ಕಾರ್ಯಗಳಲ್ಲಿ ಸಹಕಾರ ಚಳವಳಿ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರೀಯ ಬ್ಯಾಂಕುಗಳಿಂದ ರೈತರು ಸೌಲಭ್ಯ ಹೊಂದಿಕೊಳ್ಳಲು ದಾಖಲೆ ಗಾಗಿ ಅಲೆದಾಡಬೇಕಾಗುತ್ತದೆ. ಆದರೆ, ಸಹಕಾರ ಸಂಘಗಳ ಬ್ಯಾಂಕಿನವರಿಗೆ ಕೃಷಿಕನ ಬಗ್ಗೆ ಸಮಗ್ರ ಮಾಹಿತಿ ಇರಲಿದ್ದು, ಸೌಲಭ್ಯಗಳು ಯಾವದೇ ಅಡೆ ತಡೆಯಿಲ್ಲದೆ ನೇರವಾಗಿ, ಸುಲಭವಾಗಿ ದೊರಕುತ್ತದೆ ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಶೇ.90ರಷ್ಟು ಸಹಕಾರಿ ಸಂಘಗಳು ಲಾಭದಾ ಯಕವಾಗಿವೆ. ಸಂಘಗಳು ಉತ್ತಮ ಸ್ಥಿತಿಗೆ ಬರಲು ಸಿಬ್ಬಂದಿಗಳ ಸಹಕಾರ ಅಗತ್ಯ, ಸಾಲ ವಸೂಲಾತಿಯಲ್ಲಿ ಅವರ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆಯೇ ಸದಸ್ಯರುಗಳ ಜವಾಬ್ದಾರಿ ಕೂಡ ಇರುತ್ತದೆ. ಪ್ರತಿಯೋರ್ವರು ಪ್ರಾಮಾಣಿಕವಾಗಿ ಕೆಲಸ ಮಾಡಿ ಪ್ರಯತ್ನಪಟ್ಟರೆ ಲಾಭದತ್ತ ಕೊಂಡೊ ಯ್ಯಲು ಸಾಧ್ಯವಾಗುತ್ತದೆ. ಹಲವು ಗಣ್ಯರು ಸಹಕಾರಿ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅಂತಹ ಹಿರಿಯರ ದುಡಿಮೆಗೆ ಗೌರವ ನೀಡಿ ಸನ್ಮಾನಿಸಿದರೆ ಮುಂದಿನ ಪೀಳಿಗೆಗೆ ಸಹಕಾರಿ ಕ್ಷೇತ್ರದಲ್ಲಿ ಮುಂದುವರಿಯಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಹಕಾರ ಬಹುಸೇವಾ ಕೇಂದ್ರ

ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ; ಇದುವರೆಗೆ ಕೇವಲ ಕೆಸಿಸಿ, ಜಾಮೀನು, ಆಭರಣ ಸಾಲ ಮಾತ್ರ ನೀಡಲು ಸೀಮಿತವಾಗಿದ್ದ ಸಹಕಾರ ಸಂಘ ವನ್ನು ಕೇಂದ್ರ ಸರಕಾರ ಬಹುಸೇವಾ ಕೇಂದ್ರವನ್ನಾಗಿ ಮಾರ್ಪಡಿಸಿ ಹೊಸ ಕಾಯ್ದೆ ಜಾರಿಗೊಳಿಸಿದೆ. ಇದರಿಂದಾಗಿ ಮೀನುಗಾರಿಕೆ, ಹೈನುಗಾರಿಕೆ, ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ ಮಾಡುವದಕ್ಕೂ ಸೌಲಭ್ಯಗಳು ಸಿಗಲಿವೆ. 4ಏಳನೇ ಪುಟಕ್ಕೆ (ಮೊದಲ ಪುಟದಿಂದ)

ಸಮಾಜದ ಕಟ್ಟ ಕಡೆಯ ಪ್ರಜೆಗೂ ಸೌಲಭ್ಯ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಂಡಿದ್ದು, ಸಹಕಾರಿ ಕ್ಷೇತ್ರದ ಚಿತ್ರಣವೇ ಬದಲಾಗಿರುವದು ಹೆಮ್ಮೆಯ ವಿಷಯವೆಂದು ಹೇಳಿದರು. ಈ ಯೋಜನೆಯಡಿ ಮಂಗಳೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಹವಾಮಾನ ಹಾಗೂ ದಾಖಲೆಗಳ ಕೊರತೆಯಿಂದಾಗಿ ಕಾರ್ಯಗತವಾಗುತ್ತಿಲ್ಲ, ಕೆಲವು ಕಡೆಗಳಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಪೈಪೋಟಿಯೊಂದಿಗೆ ಎರಡನೇ ಸ್ಥಾನ

ಕೊಡಗು ಜಿಲ್ಲೆಯಲ್ಲಿ 23 ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕ್‍ಗಳ 180 ಶಾಖೆಗಳ ನಡುವೆ ಸಹಕಾರ ಸಂಘಗಳ ಬ್ಯಾಂಕ್‍ಗಳು ಪೈಪೋಟಿಯೊಂದಿಗೆ ಸ್ವಂತ ಬಂಡವಾಳದಲ್ಲಿ ಸ್ವಂತ ಕಾಲಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪೈಪೋಟಿಯೊಂದಿಗೆ ಠೇವಣಿ ಸಂಗ್ರಹಾತಿಯಲ್ಲಿ 3ನೇ ಸ್ಥಾನ, ಸಾಲ ನೀಡಿಕೆಯಲ್ಲಿ ಸಹಕಾರ ಬ್ಯಾಂಕ್ ಸಂಘ 2ನೇ ಸ್ಥಾನದಲ್ಲಿದೆ. ಕೆನರಾ ಬ್ಯಾಂಕ್ ಮೊದಲನೇ ಸ್ಥಾನದಲ್ಲಿದ್ದು, ಅದಕ್ಕೆ ಸರಕಾರದ ಅನುದಾನ ಬರುವದರಿಂದ ಆ ಸ್ಥಾನದಲ್ಲಿದೆ, ಸಹಕಾರ ಬ್ಯಾಂಕ್ ಅನುದಾನ ಬಂದರೆ ಮೊದಲನೇ ಸ್ಥಾನದಲ್ಲಿರುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲೇ ಮಾದರಿ

ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯಲ್ಲಿ 24 ಶಾಖೆಗಳನ್ನು ಹೊಂದಿದ್ದು, ತಾ.25ರಂದು ತನ್ನ 25ನೇ ಶಾಖೆಯನ್ನು ತಿತಿಮತಿಯಲ್ಲಿ ತೆರೆಯಲಿದೆ. 26ನೇ ಶಾಖೆ ಕಕ್ಕಬೆಯಲ್ಲಿ ಹಾಗೂ 27ನೇ ಶಾಖೆಯನ್ನು ಗುಡ್ಡೆಹೊಸೂರುವಿನಲ್ಲಿ ತೆರೆಯಲಿದ್ದು ಮುಂದಿನ 3-4ವರ್ಷಗಳಲ್ಲಿ 31 ಶಾಖೆಗಳನ್ನು ತೆರೆದುಅಗ್ರಗಣ್ಯ ಬ್ಯಾಂಕ್ ಮಾಡುವದರೊಂದಿಗೆ ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಎಂಬ ಹೆಸರು ಉಳಿಸುವ ಕೆಲಸ ಮಾಡುವದಾಗಿ ಬಾಂಡ್ ಗಣಪತಿ ಹೇಳಿದರು.

ಹಿರಿಯರ ಭಾವಚಿತ್ರ

ಜಿಲ್ಲೆಯಲ್ಲಿ ಪ್ರಥಮವಾಗಿ ಸಹಕಾರ ಸಂಘ ರಚನೆ ಮಾಡಿದ ಶಾಂತಳ್ಳಿಯ ಹಿರಿಯ ಸಹಕಾರಿ ದಿ. ದೊಡ್ಡಯ್ಯ ಅವರ ಭಾವಚಿತ್ರವನ್ನು ಜಿಲ್ಲೆಯ ಎಲ್ಲ ಸಹಕಾರ ಸಂಘಗಳಲ್ಲಿ ಅಳವಡಿಸಬೇಕೆಂಬ ಚಿಂತನೆಯನ್ನು ಹೊಂದಲಾಗಿದ್ದು, ಭಾವಚಿತ್ರಗಳನ್ನು ಕೇಂದ್ರ ಬ್ಯಾಂಕ್‍ನಿಂದ ಒದಗಿಸಲಾಗುವದು. ಇದರೊಂದಿಗೆ ಪ್ರತಿ ಸಹಕಾರ ಸಂಘಗಳಿಗಾಗಿ ದುಡಿದ ಹಿರಿಯರ ಭಾವಚಿತ್ರಗಳನ್ನು ಅಳವಡಿಸುವ ಕಾರ್ಯವನ್ನು ಆಯಾ ಗ್ರಾಮಗಳ ಸಹಕಾರ ಸಂಘಗಳು ಮಾಡಬೇಕೆಂದು ಗಣಪತಿ ಹೇಳಿದರು.

ಚಿಂತನ-ಮಂಥನದ ಸಪ್ತಾಹ

ಕಾಮನ ಬಿಲ್ಲನ್ನು ಹೋಲುವ ಏಳು ಬಣ್ಣಗಳ ಸಹಕಾರ ಧ್ವಜಾರೋಹಣದೊಂದಿಗೆ ಏಳು ದಿನಗಳ ಕಾಲ ಸಹಕಾರ ಸಪ್ತಾಹ ಆಚರಣೆ ಮಾಡಲಾಗಿದೆ. ವಿವಿಧ ವಿಷಯಗಳಡಿ ಚರ್ಚೆ, ಚಿಂತನ - ಮಂಥನ ನಡೆಸುವದಕ್ಕಾಗಿ ಈ ಸಪ್ತಾಹ ಆಚರಿಸಲಾಗಿದೆ. ಸಹಕಾರ ಸಂಘ ಸ್ಥಾಪನೆಯೊಂದಿಗೆ ನಮ್ಮ ಹಿರಿಯರು ಸಂಘಗಳ ಹೆಸರಿನಲ್ಲಿ ಸಾಕಷ್ಟು ಆಸ್ತಿ ಸಂಪಾದನೆ ಮಾಡಿಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು. ಸಹಕಾರ ಸಂಘಗಳೊಂದಿಗೆ ಧಾನ್ಯ ಸಂರಕ್ಷಣೆಯೊಂದಿಗೆ ಆ ಮೂಲಕ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯನ್ನು ಕೂಡ ಹಿರಿಯರು ಮಾಡಿದ್ದಾರೆ. ಇಂದು ಹಲವು ಸಹಕಾರ ಸಂಘಗಳು, ಧವಸ ಭಂಡಾರಗಳು ಶತಮಾನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವದು ಕೊಡಗು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿರುವದಕ್ಕೆ ಸಾಕ್ಷಿಯೆಂದು ಹೆಮ್ಮೆ ವ್ಯಕ್ತಪಡಿಸಿದರು. ಇದರೊಂದಿಗೆ ಸಹಕಾರಿ ಕ್ಷೇತ್ರ ನಡೆದುಬಂದ ಹಾದಿ ಬಗ್ಗೆ ವಿವರಣೆ ನೀಡಿದರು.

ಅಧ್ಯಯನ ಮಾಡುತ್ತಿರಬೇಕು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಮಾತನಾಡಿ; ದಿನದಿನಕ್ಕೆ ಕಾನೂನುಗಳು ಬದಲಾಗುತ್ತಿರುತ್ತವೆ, ಹಾಗಾಗಿ ನೂತನ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಅಧ್ಯಯನ ಮಾಡುತ್ತಲೇ ಇರಬೇಕು, ಎಷ್ಟೇ ಅನುಭವವಿದ್ದರೂ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಿಳಿದುಕೊಳ್ಳಬೇಕು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರಾಮಾಣಿಕತೆ, ವಿಶ್ವಾಸದಿಂದ ಮುನ್ನಡೆಯಬೇಕೆಂದು ಹೇಳಿದರು. ಗ್ರಾಮೀಣ ಪ್ರದೇಶ ಸೇರಿದಂತೆ ಗಡಿಭಾಗದಲ್ಲಿಯೂ ಸಪ್ತಾಹ ಆಚರಣೆ ಯಶಸ್ವಿಯಾಗಿದೆ. ಇದಕ್ಕೆ ಸಹಕಾರ ನೀಡಿದ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಎಲ್ಲ ಸ್ಥಳೀಯ ಸಹಕಾರ ಸಂಘಗಳಿಗೆ ಕೃತಜ್ಞತೆ ಸಲ್ಲಿಸುವದಾಗಿ ಹೇಳಿದರು.

ದಿನದ ಮಹತ್ವದ ಕುರಿತು ಸಹಕಾರ ಯೂನಿಯನ್‍ನ ನಿರ್ದೇಶಕಿ ಹಾಗೂ ಕೆಐಸಿಎಂ ನಿವೃತ್ತ ಪ್ರಾಂಶುಪಾಲೆ ಎಂ.ಎಂ.ಶ್ಯಾಮಲಾ ಮಾತನಾಡಿದರು.

ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ

ಸಮಾರಂಭದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪೊನ್ನಂಪೇಟೆಯ ಹಿರಿಯ ಸಹಕಾರಿ ಚಿರಿಯಪಂಡ ಕೆ.ಉತ್ತಪ್ಪ ಅವರಿಗೆ ಕೊಡಗು ಸಹಕಾರ ರತ್ನ, ಶುಂಠಿ ಗ್ರಾಮದ ಹೆಚ್.ಎಸ್. ಮುದ್ದಪ್ಪ ಹಾಗೂ ಬೆಟ್ಟಗೇರಿಯ ತಳೂರು ಎ.ಕಿಶೋರ್‍ಕುಮಾರ್ ಅವರುಗಳಿಗೆ ಶ್ರೇಷ್ಠ ಸಹಕಾರಿಗಳು ಪ್ರಶಸ್ತಿ, ಶನಿವಾರಸಂತೆಯ ದೇವಾಂಬಿಕ ಮಹೇಶ್ ಅವರಿಗೆ ಶ್ರೇಷ್ಠ ಮಹಿಳಾ ಸಹಕಾರಿ ಹಾಗೂ ಮಡಿಕೇರಿಯ ಆಲೆಮಾಡ ಎಸ್. ಕಾವೇರಮ್ಮ ಅವರಿಗೆ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಸಹಕಾರ ಯೂನಿಯನ್ ಹಾಗೂ ಕೇಂದ್ರ ಸಹಕಾರ ಬ್ಯಾಂಕ್‍ನ ಎಲ್ಲ ನಿರ್ದೇಶಕರುಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿವಿಧ ಸಹಕಾರ ಸಂಘಗಳ ಸದಸ್ಯರುಗಳು ಪಾಲ್ಗೊಂಡಿದ್ದರು. ಸಹಕಾರ ಯೂನಿಯನ್‍ನ ವ್ಯವಸ್ಥಾಪಕಿ ಆರ್. ಮಂಜುಳಾ ಪ್ರಾರ್ಥಿಸಿ, ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ ಸ್ವಾಗತಿಸಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು.