ಮಡಿಕೇರಿ, ನ. 20: ನಗರದಲ್ಲಿ ವ್ಯಾಪಾರ ಪರವಾನಗಿ ಪಡೆಯದೆ ಹಲವರು ವ್ಯಾಪಾರ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಅಭಿಯಾನ ನಡೆಸಿ ಲೈಸನ್ಸ್ ಪಡೆಯುವಂತೆ ಮಾಡಲು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಅ. 29 ರಂದು ಮುಂದೂಡಲ್ಪಟ್ಟ ಸಾಮಾನ್ಯ ಸಭೆಯನ್ನು ಇಂದು ನಗರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ವ್ಯಾಪಾರ ಪರವಾನಗಿ ಕುರಿತು ಹಲವು ಸದಸ್ಯರು ಪ್ರಸ್ತಾಪಿಸಿದರು. ನಗರದಲ್ಲಿ ಹಲವರು ಇನ್ನೂ ಟ್ರೇಡ್ ಲೈಸನ್ಸ್ ಪಡೆದಿಲ್ಲ ಹಾಗೂ ನವೀಕರಿಸಿಕೊಂಡಿಲ್ಲ. ಈ ಕುರಿತು ಜಾಗೃತಿ ಮೂಡಿಸಿ ಲೈಸನ್ಸ್ ಮಾಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಪೌರಾಯುಕ್ತ ರಮೇಶ್ ಮಾತನಾಡಿ, ಈಗಾಗಲೇ ಹಲವರಿಗೆ ನೋಟೀಸ್ ನೀಡಲಾಗಿದ್ದರೂ ಪರವಾನಗಿ ಮಾಡಿಸಿಕೊಂಡಿಲ್ಲ ಎಂದರು. ಬಿಜೆಪಿ ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, ನಗರದಲ್ಲಿ ಶೇ 50 ವ್ಯಾಪಾರಿಗಳು ಪರವಾನಗಿ ಪಡೆದಿಲ್ಲ ಎಂದು ಆರೋಪಿಸಿದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಟ್ರೇಡ್ ಲೈಸನ್ಸ್ ಪಡೆಯುವ ನಿಟ್ಟಿನಲ್ಲಿ ಅಭಿಯಾನ ಕೈಗೊಂಡು 1 ತಿಂಗಳ ಅವಕಾಶ ನೀಡಬೇಕು. ಈ ಅವಧಿಯಲ್ಲಿ ಪರವಾನಗಿ ಪಡೆಯದಿದ್ದಲ್ಲಿ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಶೆಡ್ ಬಂದ್‍ಗೆ ನಿರ್ಧಾರ

ನಗರದ ಮೈಸೂರು ರಸ್ತೆಯಲ್ಲಿರುವ ತಾತ್ಕಾಲಿಕ ಶೆಡ್ ವಿಚಾರದ ಕುರಿತು ಸುದೀರ್ಘ ಚರ್ಚೆಗಳು ನಡೆದು ಸದಸ್ಯರುಗಳ ನಡುವೆ ವಾಗ್ವಾದ ಉಂಟಾಯಿತು. ಕೊನೆಗೆ ನ್ಯಾಯಾಲಯದ ಆದೇಶ ಬರುವ ತನಕ ಶೆಡ್ ಅನ್ನು ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಸಭೆ ಆರಂಭದಲ್ಲಿಯೇ ಶೆಡ್ ವಿಚಾರ ಮುನ್ನಲೆಗೆ ಬಂತು. ರಾಜೇಶ್ ಯಲ್ಲಪ್ಪ ಹಾಗೂ ಉಮೇಶ್ ಸುಬ್ರಮಣಿ ನಡುವೆ ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಸಭೆ ಪ್ರಾರಂಭದಲ್ಲಿ ಈ ಕುರಿತು ಪ್ರಸ್ತಾಪಿಸಿ, ಕಳೆದ ಬಾರಿಯ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದ್ದು, ಇದೊಂದೇ ವಿಚಾರದಲ್ಲಿ ವಿಶೇಷ ಸಭೆ ನಡೆಸಲು ನಿರ್ಣಯ ಮಾಡಲಾಗಿತ್ತು. ಆದರೆ, ಇದುವರೆಗೂ ಸಭೆ ನಡೆಸಿಲ್ಲ. ಅಧ್ಯಕ್ಷರು ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕಲಾವತಿ, ಕೆಲ ಸದಸ್ಯರು ಹಾಗೂ 4ಏಳನೇ ಪುಟಕ್ಕೆ (ಮೊದಲ ಪುಟದಿಂದ)

ತಾನು ಊರಿನಲ್ಲಿ ಇಲ್ಲದ ಕಾರಣ ಸಭೆ ನಡೆಸಲಾಗಲಿಲ್ಲ ಎಂದು ಸಮರ್ಥಿಸಿಕೊಂಡರು.

ಮೈಸೂರು ರಸ್ತೆಯಲ್ಲಿರುವ ಶೆಡ್ ಅನಧಿಕೃತವಾಗಿದ್ದು, ಅದನ್ನು ತೆರವು ಮಾಡಬೇಕೆಂದು ರಾಜೇಶ್ ಪಟ್ಟು ಹಿಡಿದರು. ಬಿಜೆಪಿ ಸದಸ್ಯೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಶೆಡ್ ಮಾಲೀಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದರು.

ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ಮಾಲೀಕರು ಎಲ್ಲಾ ರೀತಿಯ ನಿರಾಕ್ಷೇಪಣ ಪತ್ರ, ಅನುಮತಿಯನ್ನು ಪಡೆದಿದ್ದಾರೆ. ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಪಾವತಿಸಿದ್ದಾರೆ. ಒಂದು ಮಳಿಗೆಯನ್ನು ಗುರಿ ಮಾಡಿ ಮುಚ್ಚಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರು ಅಧಿಕಾರ ದುರುಪಯೋಗ ಮಾಡಿಕೊಂಡು ಅನುಮತಿ ನೀಡಲು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ ರಾಜೇಶ್ ಯಲ್ಲಪ್ಪ, ಕಾನೂನಾತ್ಮಕ ಸಮಸ್ಯೆಯ ಬಗ್ಗೆ ನಗರಸಭೆ ಕಾನೂನು ಸಲಹೆಗಾರರೇ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಶೆಡ್‍ಗೆ ಸಂಬಂಧಿಸಿದವರು ಟ್ರೇಡ್ ಲೈಸನ್ಸ್ ಪಡೆದಿಲ್ಲ ಎಂದರು.

ಎಸ್‍ಡಿಪಿಐ ಸದಸ್ಯ ಮನ್ಸೂರು ಅಲಿ ಮಾತನಾಡಿ, ತಾತ್ಕಾಲಿಕ ಶೆಡ್‍ಗೆ ಸೀಮಿತ ಅವಧಿಗೆ ಮಾತ್ರ ಅನುಮತಿ ನೀಡಲು ಸಾಧ್ಯ. ಮಾರ್ಗಸೂಚಿ ಅನ್ವಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದಲ್ಲಿರುವ ಅರ್ಜಿಯ ಸ್ಥಿತಿಗತಿಯ ಬಗ್ಗೆ ತಿಳಿದು ಕಾನೂನು ಸಲಹೆಯನ್ನು ಪಡೆದು ಮುಂದುವರೆಯುವಂತೆ ರಾಜೇಶ್ ಯಲ್ಲಪ್ಪ ಸಲಹೆ ನೀಡಿದರು.

ಬಿಜೆಪಿ ಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಪ್ರತಿ ಬಾರಿಯೂ ಸಭೆಯಲ್ಲಿ ಶೆಡ್ ವಿಚಾರ ಪ್ರಸ್ತಾಪವಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇತರ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದರು.

ಬಿಜೆಪಿ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಶೆಡ್ ವಿಚಾರದಲ್ಲಿ ತಾರ್ಕಿಕ ಅಂತ್ಯ ದೊರೆಯಬೇಕು. ವಿಶೇಷ ಸಭೆ ನಡೆಸದಿರುವುದು ಗೊಂದಲಕ್ಕೆ ಕಾರಣವಾಗಿದೆ. ನ್ಯಾಯಾಲಯದ ಆದೇಶವನ್ನು ತಿಳಿದು ಮುಂದುವರೆಯಬೇಕಾಗಿದೆ. ಹಠ ಬಿಟ್ಟು, ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಬೇಕು ಎಂದರು.

ಎಸ್.ಡಿ.ಪಿ.ಐ. ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಶೆಡ್ ವಿಚಾರದಲ್ಲಿ 9 ಅಂಶಗಳು ತಪ್ಪಾಗಿರುವುದರ ಬಗ್ಗೆ ಪೌರಾಯುಕ್ತರು ವರದಿ ನೀಡಿದ್ದಾರೆ. ಆದೇಶ ಬರುವ ತನಕ ಬಂದ್ ಮಾಡಿ. ನಂತರ ಮುಂದಿನ ಕ್ರಮಕೈಗೊಳ್ಳುವಂತೆ ಹೇಳಿದರು.

ಕೇವಲ ಒಂದು ಶೆಡ್‍ಗೆ ಇದು ಮೀಸಲಾಗಿರಬಾರದು. ಎಲ್ಲಾ ಅನಧಿಕೃತ ಶೆಡ್‍ಗಳ ವಿರುದ್ಧವೂ ಕ್ರಮವಾಗಬೇಕೆಂದು ಹಲವು ಸದಸ್ಯರು ಆಗ್ರಹಿಸಿದರು.

ಸಂಪಿಗೆಕಟ್ಟೆಯಲ್ಲಿರುವ ಮನೆಯೊಂದು ಅನಧಿಕೃತ ಎಂಬ ಆರೋಪಕ್ಕೆ ಸೂಕ್ತ ದಾಖಲೆಗಳಿಲ್ಲ. ಕಾನೂನು ಸಲಹೆ ಪಡೆದು ಮುಂದಿನ ಹೆಜ್ಜೆಹಿಡಲು ನಿರ್ಧರಿಸಲಾಯಿತು.

‘ಪಾರ್ಕಿಂಗ್’ ಟೆಂಡರ್ ಹಣ ಬಾಕಿ

ರಾಜಾಸೀಟ್ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಶುಲ್ಕ ಪಡೆಯಲು ಟೆಂಡರ್ ಪಡೆದವರು ಪೂರ್ಣ ಮೊತ್ತ ಪಾವತಿಸದಿರುವುದರ ಕುರಿತು ಪ್ರಕರಣ ದಾಖಲಿಸುವ ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದರು.

ಈ ಕುರಿತು ಸದಸ್ಯೆ ಅನಿತಾ ಪ್ರಸ್ತಾಪಿಸಿ, ಟೆಂಡರ್ ಹಣವನ್ನು ಮೊದಲೇ ಪಾವತಿಸಬೇಕಾಗಿತ್ತು. ಅಲ್ಪ ಮೊತ್ತ ಪಾವತಿಸಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಇದೀಗ ಸ್ಥಗಿತಗೊಂಡಿದೆ. ಆದರೆ, ಉಳಿದ ಮೊತ್ತವನ್ನು ಪಡೆಯಬೇಕೆಂದರು. ರಸ್ತೆಯಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ ಎಂದು ಅಪ್ಪಣ್ಣ ಅಭಿಪ್ರಾಯಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಕಂದಾಯಾಧಿಕಾರಿ ತಾಹೀರ್, ಹಣ ಪಾವತಿ ಮಾಡದ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿದೆ. ಅವಧಿ ಮುನ್ನವೇ ವಸೂಲಿ ಮಾಡಿದ ಆರೋಪವೂ ಟೆಂಡರ್‍ದಾರರ ವಿರುದ್ಧವಿದೆ. ನಿಯಮ ಉಲ್ಲಂಘಿಸಿ ಹಣ ವಸೂಲಾತಿ ಮಾಡಿದ ಹಿನ್ನೆಲೆ ಸಂಗ್ರಹಾತಿಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಹಣ ವಸೂಲಿ ಮಾಡಿದ ಬಗ್ಗೆಯೂ ದೂರುಗಳಿವೆ ಎಂದು ಸಭೆಯ ಗಮನಕ್ಕೆ ತಂದರು.

ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಹಣ

ನಗರದ ಅಪ್ಪಯ್ಯ ಗೌಡ ಪ್ರತಿಮೆ ಸಮೀಪದ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ನಗರಸಭೆಯಿಂದ ರೂ. 20 ಲಕ್ಷ ಅನುದಾನ ನೀಡಲು ಸಭೆಯಲ್ಲಿ ಒಪ್ಪಿಗೆ ದೊರೆಯಿತು. ಪ್ರತಿಮೆ ನಿರ್ಮಾಣಕ್ಕೆ ರೂ. 44.50 ಲಕ್ಷ ಅಂದಾಜು ಮೊತ್ತವಿದ್ದು, ಬಾಕಿ ಹಣವನ್ನು ಶಾಸಕರ ನಿಧಿಯಿಂದ ಪಡೆಯಲಾಗುವುದು ಎಂದು ಸದಸ್ಯ ಸತೀಶ್ ಹೇಳಿದರು. ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ಪಡೆಯಲಾಯಿತು. ತಕ್ಷಣ ಬೀದಿ ದೀಪ ಅಳವಡಿಕೆಗೆ ರೂ. 7.50 ಲಕ್ಷವಿದ್ದು, ಅದನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗುವುದು ಎಂದರು.