ಕುಶಾಲನಗರ, ನ. 20: ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೊರೆಯುಕ್ತ ರಾಸಾಯನಿಕ ನೀರು ಹರಿದು ನದಿ ತಟದ ಜನತೆ ಆತಂಕಕ್ಕೆ ಒಳಗಾದ ಘಟನೆ ಬುಧವಾರ ನಡೆದಿದೆ.

ಅಪೂರ್ಣಗೊಂಡಿರುವ ಒಳಚರಂಡಿ ಕಾಮಗಾರಿಯ ಮೂಲಕ ಕಟ್ಟಡಗಳಿಂದ ತ್ಯಾಜ್ಯ ಹರಿಸಿದ ಸಂದರ್ಭ ಪೈಪ್ ಒಡೆದು ಈ ಪರಿಸ್ಥಿತಿ ಉಂಟಾಗಿರುವುದಾಗಿ ಒಳ ಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೆಡೆ ವಾಣಿಜ್ಯ ಕಟ್ಟಡಗಳಿಂದ ಅಪೂರ್ಣಗೊಂಡಿರುವ ಒಳಚರಂಡಿ ಯೋಜನೆಯ ಪೈಪ್ ಮೂಲಕ ಅಕ್ರಮವಾಗಿ ಕಲುಷಿತ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಬೈಚನಹಳ್ಳಿ ಬಳಿಯಿಂದ ಸಾವಿರಾರು ಲೀಟರ್ ಪ್ರಮಾಣದ ಕಲುಷಿತ ನೀರು ನದಿಗೆ ಹರಿದಿದೆ.

ಈ ಸಂದರ್ಭ ನದಿ ನೀರು ಬಳಕೆ ಮಾಡಿದ ಹಲವರಿಗೆ ಮೈತುರಿಕೆ ಮತ್ತಿತರ ವ್ಯತಿರಿಕ್ತ ಪರಿಣಾಮಗಳು ಉಂಟಾಗಿವೆ. ಈ ಬಗ್ಗೆ ಮಾಹಿತಿ ದೊರೆತ ಒಳಚರಂಡಿ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ನದಿಗೆ ಪೈಪ್ ಮೂಲಕ ಹರಿಯುವ ನೀರು ಸೇರ್ಪಡೆಗೊಳ್ಳದಂತೆ ತಕ್ಷಣ ಕ್ರಮಕ್ಕೆ ಮುಂದಾಗಿರುವುದಾಗಿ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕರ್ನಾಟಕ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಇಂಜಿನಿಯರ್ ಬಿಪಿನ್, ಅಕ್ರಮವಾಗಿ ಯುಜಿಡಿ ಪೈಪ್‍ಗೆ ನೇರವಾಗಿ ಕಲುಷಿತ ನೀರು ಹಾಯಿಸಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

ಪೈಪ್ ಒಳಭಾಗದಲ್ಲಿ ಸಂಗ್ರಹ ಆಗಿರುವ ಕಲುಷಿತ ನೀರನ್ನು ಹೊರತೆಗೆಯಲು ಯಂತ್ರೋಪಕರಣಗಳನ್ನು ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾವೇರಿ ನದಿಗೆ ನೇರವಾಗಿ ಕಲುಷಿತ ನೀರು ಹರಿದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಸ್ತುವಾರಿ ಅಧಿಕಾರಿ ಉಮಾಶಂಕರ್ ತಿಳಿಸಿದ್ದು, ವಾಣಿಜ್ಯ ಕಟ್ಟಡಗಳಿಂದ ಯಾವುದೇ ಸಂದರ್ಭ ನದಿಗೆ ನೇರವಾಗಿ ಕಲುಷಿತ ನೀರು ಹರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.