ವೀರಾಜಪೇಟೆ, ನ. 20: ವೀರಾಜಪೇಟೆಯ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಗೌರಿ ಕೆರೆ ಬಳಿಯ ನಸ್ರತುಲ್ ಉಲುಂ ಮದ್ರಾಸದ ಸಭಾಂಗಣದಲ್ಲಿ ರಕ್ತದಾನದ ಶಿಬಿರವನ್ನು ನಡೆಸಿದರು.
ಟ್ರಸ್ಟ್ನ ಗೌರವ ಅಧ್ಯಕ್ಷ ಮಹಮ್ಮದ್ ರಾಫಿ ಮಾತನಾಡಿ, ನಮ್ಮ ಸಂಸ್ಥೆಯು ಹದಿನೈದು ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಬಂದಿದೆ. ಇಂದು ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಮಾಡಿದ್ದೇವೆ ಎಂದರು.
ಮದ್ರಸದ ಶಿಕ್ಷಕ ಹ್ಯಾರಿಸ್ ಬಾಖವಿ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿಯಿಲ್ಲ. ಮನುಷ್ಯನಿಗೆ ರಕ್ತ ಅವಶ್ಯಕತೆ ಬಂದಾಗ ಯಾವ ಜಾತಿಯವರ ರಕ್ತ ಎಂದು ಯಾರೂ ಪ್ರಶ್ನೆ ಮಾಡುವುದಿಲ್ಲ.
ಅಗತ್ಯದ ಸಮಯದಲ್ಲಿ ರಕ್ತ ಸಿಕ್ಕಿ ಪ್ರಾಣ ಉಳಿದರೆ ಸಾಕು ಎಂದು ಹೇಳುವ ಕಾಲ ಇದು ಎಂದು ತಿಳಿಸಿದರು.
ಅಮಲ ಆಸ್ಪತ್ರೆ ವೈದ್ಯ ಅಮಲ್ನಾಥ್ ಮಾತನಾಡಿ, ಒಂದು ಸದಸ್ಯರಿಂದ ಪಡೆದ ಒಂದು ಯೂನಿಟ್ ರಕ್ತದಲ್ಲಿ ನಾಲ್ಕು ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಹಿಲ್ ಬ್ಲೂಮ್ ಆಸ್ಪತ್ರೆಯ ವೈದ್ಯ ಪಾಯಿಸ್ ಮಾತನಾಡಿ, ಯಾರೂ ಕೂಡ ಹೆದರದೆ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯ ಕರುಂಬಯ್ಯ ಮಾತನಾಡಿ, ಎಲ್ಲಾ ಸಂಘಗಳು ಈ ರೀತಿಯ ರಕ್ತದಾನ ಶಿಬಿರಗಳನ್ನು ವರ್ಷಕ್ಕೆ ಒಂದು ಬಾರಿಯಾದರೂ ನಡೆಸಿದರೆ ಮಾತ್ರ ರಕ್ತದ ಕೊರತೆ ನೀಗಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಆಲಿರ ಪವಿಲ್, ಶಾಫಿ ಜುಮಾ ಮಸೀದಿ ಅಧ್ಯಕ್ಷ ರಶೀದ್ ಹಾಜಿ, ಯುವ ಅಧ್ಯಕ್ಷ ಅನ್ಸಾರ್, ಗುತ್ತಿಗೆದಾರ ಅಯ್ಯುಬ್ ಹಾಜರಿದ್ದರು.
ಸಂಸ್ಥೆಯ ಎಲ್ಲಾ ಸದಸ್ಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ 65 ಯೂನಿಟ್ ರಕ್ತ ಸಂಗ್ರಹಣೆಯಾಯಿತು.