ಹೆಬ್ಬಾಲೆ, ನ. ೧೯: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲೂ ವಿಸ್ತಾರವಾಗಿದೆ. ಜಿಲ್ಲೆಯ ಗಡಿ ಗ್ರಾಮವಾಗಿರುವ ಈ ಗ್ರಾಮ ಅರೆಮಲೆನಾಡು ಹಾಗೂ ಬಯಲು ಸೀಮೆಯ ಪ್ರದೇಶವಾಗಿದೆ. ಇಲ್ಲಿನ ಆಚಾರ ವಿಚಾರ,ಸಂಸ್ಕೃತಿ ಜಿಲ್ಲೆಯ ಇತರೇ ಗ್ರಾಮಗಳಿಗಿಂತ ಸ್ವಲ್ಪ ಭಿನ್ನತೆಯನ್ನು ಹೊಂದಿದೆ.ಇಲ್ಲಿನ ಕಲೆ, ಕ್ರೀಡೆಗಳು ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಗ್ರಾಮಗಳೊಂದಿಗೆ ಬಾಂಧವ್ಯವನ್ನು ಹೊಂದಿದ್ದು, ಈ ಗ್ರಾಮದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆಯೊಂದು ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ಹಬ್ಬವನ್ನು ಸಡಗರ ಸಂಭ್ರಮದೊAದಿಗೆ ವಿಜೃಂಭಣೆಯಿAದ ಆಚರಿಸುತ್ತಾರೆ. ಈ ಹಬ್ಬ ಇಡೀ ಜಿಲ್ಲೆಯಲ್ಲಿ ನಡೆಯುವ ದೊಡ್ಡ ಗ್ರಾಮೀಣ ಹಬ್ಬವಾಗಿದೆ.

ಕಳೆದ ಅನೇಕ ವರ್ಷಗಳಿಂದ ಈ ಹಬ್ಬವನ್ನು ಮಿನಿ ಮಡಿಕೇರಿ ದಸರಾ ಮಾದರಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮದ ಬಸವೇಶ್ವರ ಹಾಗೂ ಶ್ರೀ ಬನಶಂಕರಿ ದೇವಾಲಯ ಸಮಿತಿ ವತಿಯಿಂದ ತಾ.೨೧ ರಂದು ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಪೂಜಾಮಹೋತ್ಸವ ಹಾಗೂ ಜಾತ್ರೋತ್ಸವ ನಡೆಯಲಿದೆ. ಹಬ್ಬದ ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿದೆ.

ಹೆಬ್ಬಾಲೆ ಸುತ್ತಮುತ್ತಲಿನ ಗ್ರಾಮಸ್ಥರು ಶಕ್ತಿ ದೇವತೆ ಶ್ರೀ ಬನಶಂಕರಿ ದೇವಿಯನ್ನು ಪೂಜಿಸುತ್ತ ಆರಾಧಿಸುತ್ತಿದ್ದಾರೆ. ಹೆಬ್ಬಾಲೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಇಲ್ಲಿನ ಜನರ ಪ್ರಗತಿಗೆ ಗ್ರಾಮದೇವತೆ ಬನಶಂಕರಿಯೇ ಕಾರಣೀಭೂತಳು ಎಂಬ ದೃಢ ನಂಬಿಕೆ ಗ್ರಾಮಸ್ಥರಲ್ಲಿದೆ.

ಈ ಹಿನ್ನೆಲೆಯಲ್ಲಿ ಅಮ್ಮನವರ ಹಬ್ಬಕ್ಕೆ ವಿವಿಧೆಡೆ ನೆಲೆಸಿರುವ ಗ್ರಾಮಸ್ಥರು ತಪ್ಪದೇ ಪಾಲ್ಗೊಂಡು ದೇವಿಯ ಆರಾಧಿಸುತ್ತ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ. ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಪಾಲ್ಗೊಂಡು ದೇವಿ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಗ್ರಾಮದಲ್ಲಿ ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಒಂದೊAದು ಸಮುದಾಯದ ಜನರು ಒಂದೊAದು ಸೇವಾರ್ಥಗಳನ್ನು ವಹಿಸಿಕೊಳ್ಳುವ ಮೂಲಕ ಹಬ್ಬದ ಯಶಸ್ಸಿಗೆ ಶ್ರಮಿಸುತ್ತಾರೆ. ದೇವಿಯ ಉತ್ಸವದೊಂದಿಗೆ ಗ್ರಾಮದ ವಿವಿಧ ಬ್ಲಾಕ್ (ಬೀದಿ)ಗಳ ಉತ್ಸವ ಸಮಿತಿ ವತಿಯಿಂದಲೂ ಕೂಡ ವಿವಿಧ ಉತ್ಸವ ಮಂಟಪಗಳನ್ನು ಸಿದ್ಧಪಡಿಸಿ ಮೆರವಣಿಗೆ ನಡೆಸುತ್ತಾರೆ.

ಈ ಉತ್ಸವ ಮಂಟಪಗಳ ಶೋಭಾಯಾತ್ರೆ ಹಬ್ಬಕ್ಕೆ ಮೆರಗು ನೀಡುತ್ತದೆ. ಶುಕ್ರವಾರ ಮಧ್ಯರಾತ್ರಿ ಗ್ರಾಮದ ಬಸವೇಶ್ವರ ದೇವಾಲಯ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ಬನಶಂಕರಿ ದೇವಿಯ ಉತ್ಸವ ಮಂಟಪ ಹಾಗೂ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆ ಸಂದರ್ಭ ಆಕರ್ಷಕ ಮದ್ದುಗುಂಡು ಬಾಣಬಿರುಸುಗಳ ಪ್ರದರ್ಶನ ಹಬ್ಬಕ್ಕೆ ವಿಶೇಷ ಆಕರ್ಷಣೆಯಾಗಿದೆ. ಅಂದು ಗ್ರಾಮದ ಬಸ್ ನಿಲ್ದಾಣದ ಬಳಿ ಸಿಡಿಸುವ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತದೆ.

ಐತಿಹಾಸಿಕ ಹಿನ್ನೆಲೆ :

ಈ ಗ್ರಾಮದಲ್ಲಿ ಬನಶಂಕರಿ ದೇವಾಲಯ ನಿರ್ಮಾಣವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.ವಿಜಯನಗರ ಕೃಷ್ಣದೇವರಾಯ ಆಳ್ವಿಕೆ ಸಂದರ್ಭ ಈ ಬನಶಂಕರಿ ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾಗಿದೆ. ವಿಜಯನಗರ ಮತ್ತು ಬಾದಾಮಿ ಮೇಲೆ ಮಹಮ್ಮದ್ ಘಜ್ನಿ ದಾಳಿ ನಡೆಸಿದ ಸಂದರ್ಭ ಅಲ್ಲಿಂದ ವಲಸೆ ಬಂದ ಸೈನ್ಯ ಮತ್ತು ಜನರು ಹೆಬ್ಬಾಲೆ ಗ್ರಾಮದ ದಟ್ಟಾರಣ್ಯದ ಬಳಿ ತಲೆಮರೆಸಿಕೊಂಡು ವಾಸವಾಗಿದ್ದರು. ಈ ವೇಳೆ ಬಾದಾಮಿ ಜನರು ತಮ್ಮ ಕುಲದೇವತೆ ಬನಶಂಕರಿ ದೇವಿಯ ಕಲ್ಲಿನ ವಿಗ್ರಹವನ್ನು ತಂದ ಸೈನ್ಯದ ನಾಯಕ ತಿಮ್ಮನಾಯಕ ಎಂಬ ವ್ಯಕ್ತಿ ಹೆಬ್ಬಾಲೆಯ ದಟ್ಟ ಅರಣ್ಯದ ನಡುವೆ ಕಲ್ಲಿನ ಚಪ್ಪಡಿಗಳನ್ನು ಬಳಸಿಕೊಂಡು ಸಣ್ಣದಾದ ಗುಡಿಯನ್ನು ನಿರ್ಮಾಣ ಮಾಡಿ ನಿತ್ಯ ಪೂಜಿಸುತ್ತಿದ್ದರು ಎಂಬ ಕಥೆಯಿದ್ದು, ನಂತರ ದಿನಗಳಲ್ಲಿ ಶ್ರೀಬನಶಂಕರಿ ದೇವಿ ಹೆಬ್ಬಾಲೆ ಗ್ರಾಮಸ್ಥರ ಆರಾಧ್ಯ ದೇವತೆಯಾಗಿಯೂ ಹಾಗೂ ಗ್ರಾಮ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ ಎಂದು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ್ ತಿಳಿಸಿದ್ದಾರೆ.

ಈ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ಹಾಗೂ ಜಾತ್ರೋತ್ಸವಕ್ಕೆ ಸಕಲ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ತಾ.೨೧ರ ರಾತ್ರಿ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಪ್ರತಿವರ್ಷದಂತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ ೭ ಘಂಟೆಗೆ ಗಣಪತಿ ಪೂಜೆ,ಪುಣಾಹಃ ರಕ್ಷಾಬಂಧನ ಧ್ವಜಾರೋಹಣ ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯಲಿವೆ.

ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ್ ಮತ್ತು ಕಾರ್ಯದರ್ಶಿ ಎಚ್.ಟಿ. ಸೋಮಣ್ಣ ಹಾಗೂ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿವೆ. ಸಂಜೆ ೪ ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಗುತ್ತದೆ. ರಾತ್ರಿ ೯ ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಗುತ್ತದೆ. ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ. ರಾತ್ರಿ ೧೦ ಗಂಟೆ ವೇಳೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನÀಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಗುತ್ತದೆ. ಇಷ್ಟಾರ್ಥ ನೆರವೇರಿಸು ತಾಯೇ ಎಂದು ೯ ದಿವಸ ಉಪವಾಸ ವ್ರತ ಆಚರಿಸಿ ಅಂದು ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಆಗಮಿಸುವ ಹರಕೆ ಹೊತ್ತ ಭಕ್ತರು ಅಗ್ನಿಕುಂಡ ತುಳಿದು ದೇವಿಯ ಹಣ್ಣುತುಪ್ಪ ಅಭಿಷೇಕ ಮಾಡಿ ಆಶೀರ್ವಾದವನ್ನು ಪಡೆದು ದೇವಿಗೆ ಕೃಪೆಗೆ ಪಾತ್ರರಾಗುತ್ತಾರೆ. ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆಯು ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತವೆ. ಮೆರವಣಿಗೆ ಸಂದರ್ಭ ವೀರಗಾಸೆ ವೀರಭದ್ರೇಶ್ವರ ಕುಣಿತ ಹಾಗೂ ಕಂಸಾಳೆ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಲಿವೆ. ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಬ್ಬದ ಸಿದ್ಧತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇಡೀ ಗ್ರಾಮವನ್ನು ಶುಚಿಗೊಳಿಸುವ ಕಾರ್ಯವನ್ನು ಗ್ರಾ.ಪಂ.ವತಿಯಿAದ ಕೈಗೊಳ್ಳಲಾಗಿದೆ.

ಅನ್ನದಾನ : ದೇವಸ್ಥಾನ ಸಮಿತಿ ವತಿಯಿಂದ ರಾತ್ರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೈಗೊಳ್ಳಲಾಗಿದೆ.