ಕಣಿವೆ, ನ. ೧೯: ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟ ಇತ್ತೀಚೆಗೆ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಆಗಮಿಸಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅರೆಸೇನಾಪಡೆಯಲ್ಲಿ ಕರ್ತವ್ಯಗೈದು ನಿವೃತ್ತಿಯಾದ ಮಾಜಿ ಸೈನಿಕರು ಸೇರಿ ಕಳೆದ ೧೩ ವರ್ಷಗಳಿಂದ ಮಡಿಕೇರಿಯ ಮಹದೇವಪೇಟೆಯಲ್ಲಿ ಖಾಸಗಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಕಚೇರಿ ತೆರೆದಿದ್ದೇವೆ. ಕೊಡಗು ಜಿಲ್ಲೆಯಲ್ಲಿ ಸುಮಾರು ೪ ಸಾವಿರದಷ್ಟು ಅರೆಸೇನಾಪಡೆಯ ಯೋಧರು ಇದ್ದೇವೆ. ಮಾಜಿ ಯೋಧರ ಬೇಡಿಕೆಗಳು, ಯೋಧರ ವಿಧವಾ ಪತ್ನಿಯರು ಹಾಗೂ ಮಕ್ಕಳ ಯೋಗಕ್ಷೇಮಕ್ಕಾಗಿ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ.
ಒಕ್ಕೂಟದ ವತಿಯಿಂದ ಗುರುತಿಸಿರುವ ಕುಶಾಲನಗರದ ಮುಳ್ಳುಸೋಗೆಯ ಸರ್ಕಾರಿ ಭೂಮಿಯಲ್ಲಿ ಒಕ್ಕೂಟಕ್ಕೆ ಸೂಕ್ತ ನಿವೇಶನ ದೊರಕಿಸಿಕೊಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು.
ಒಕ್ಕೂಟದ ಅಧ್ಯಕ್ಷರಾದ ಎಂ.ಜಿ. ಯತೀಶ್, ಸಂಚಾಲಕರಾದ ನೂರೇರ ಭೀಮಯ್ಯ, ನಿರ್ದೇಶಕರಾದ ಜಿ.ಕೆ.ದಿನೇಶ್ ಕುಮಾರ್ ಹಾಗೂ ಪದಾಧಿಕಾರಿಗಳು ಇದ್ದರು.