ಕುಶಾಲನಗರ, ನ. ೧೯: ಬೆಳಗಾವಿ ಸೇರಿದಂತೆ ಮುಂಬೈ ಗಡಿಭಾಗದ ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕ ರಾಜ್ಯದಲ್ಲಿ ಇಂದಿಗೂ ಉಳಿದಿದ್ದರೆ ಅದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳ ಹೋರಾಟ ಪ್ರಮುಖ ಕಾರಣವಾಗಿದೆ ಎಂದು ಪತ್ರಕರ್ತ ಮುರಳೀಧರ್ ಅಭಿಪ್ರಾಯಪಟ್ಟರು.

ಕುಶಾಲನಗರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣವಾದ ನಂತರ ಕಾಸರಗೋಡು, ಹೊಸೂರು, ಬೆಳಗಾವಿಯ ಹಲವು ಕನ್ನಡ ಮಾತನಾಡುವ ಪ್ರದೇಶಗಳನ್ನು ನಾವು ಕಳೆದುಕೊಂಡಿದ್ದೇವೆ. ೨೪ ಮಂದಿ ಶಾಸಕರಿದ್ದ, ಪ್ರತ್ಯೇಕ ಎಂ.ಪಿ ಇದ್ದ ಅಂದಿನ ಕೊಡಗು ಏಕೀಕರಣದ ನಂತರ ೨ ಶಾಸಕ ಸ್ಥಾನಕ್ಕೆ ಸೀಮಿತವಾಗಿದೆ. ಇದ್ದ ಸಂಸತ್ ಸ್ಥಾನವೂ ಕಳೆದುಕೊಂಡಿದ್ದೇವೆ.

ಜಿಲ್ಲೆಗೆ ಸೀಮಿತವಾಗಿ ಲೋಕಸಭಾ ಸ್ಥಾನಕ್ಕೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ನಾಡು, ನುಡಿ ರಕ್ಷಣೆಗೆ ಕಟಿಬದ್ದರಾಗಿದ್ದೇವೆ. ಇದರೊಂದಿಗೆ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಕೆಲಸ ನಿರಂತರ ನಡೆಯಲಿದೆ. ಸಮಾಜ ಒಳಿತಿಗಾಗಿ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮತ್ತು ಕೃಷಿ ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ೩೪ ನೇ ರ‍್ಯಾಂಕ್ ಗಳಿಸಿದ ಸೋಮವಾರಪೇಟೆಯ ವಿದ್ಯಾರ್ಥಿ ಸೃಜನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಸಿ.ಎಂ ಆಸಿಫ್ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ, ಪದಾಧಿಕಾರಿಗಳಾದ ಗಣೇಶ್, ಶಶಿಕಲಾ, ಸಂಧ್ಯಾ ಗಣೇಶ್, ರೇಣುಕಾ, ನಂಜಪ್ಪ, ಹರೀಶ್ ಮಂಜುನಾಥ್, ರವಿಷ್, ಪುರುಷೋತ್ತಮ್ ಮತ್ತಿತರರು ಇದ್ದರು.