ಮಡಿಕೇರಿ, ನ. ೧೯: ಮಡಿಕೇರಿ ನಗರದ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಪ್ರಸಕ್ತ ಸಾಲಿನಿಂದಲೇ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಈ ವಿಭಾಗದ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ತಾ. ೧೪ರಂದು ನಗರಸಭೆಯ ಆಯುಕ್ತ ರಮೇಶ್ ಅವರಿಂದ ಅಧಿಕೃತವಾಗಿ ಅನುಮತಿ ಪತ್ರವನ್ನು ಪಡೆದರು.

ಅಬ್ದುಲ್ ಕಲಾಂ ಬಡಾವಣೆಯಲ್ಲಿ ಆಟದ ಬಯಲು ಹಾಗೂ ಉದ್ಯಾನವನ್ನು ನಿರ್ಮಿಸುವುದರೊಂದಿಗೆ ಇಲ್ಲಿನ ರಸ್ತೆ ದುರಸ್ತಿ ಜೊತೆಗೆ ಅಂಗನವಾಡಿ ಕಟ್ಟಡವನ್ನು ನಿರ್ಮಿಸಬೇಕೆಂಬುದರ ಬಗ್ಗೆ ಕಳೆದ ೨೦೨೩ರ ಅಕ್ಟೋಬರ್ ೪ ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಮೀನ್ ಮೊಹಿಸಿನ್ ರವರು ಪ್ರಸ್ತಾಪಿಸಿದ್ದರು. ಈ ಕುರಿತು ಕೌನ್ಸಿಲ್ ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿತ್ತು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.

ಮಕ್ಕಳ ಮತ್ತು ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಗರಸಭಾ ಆಯುಕ್ತರು ಅಧಿಕೃತವಾಗಿ ನೀಡಿದ ಆದೇಶ ಪತ್ರವನ್ನು ಪಡೆಯುವ ಸಂದರ್ಭ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಅಬ್ದುಲ್ ಕಲಾಂ ಬಡಾವಣೆಯ ಸೌಹಾರ್ದ ಸಮಿತಿಯ ಅಧ್ಯಕ್ಷ ಎಂ.ಎ. ಸಾಧು ಸಾಧಿಕ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಹಾಜರಿದ್ದರು.