ಮಡಿಕೇರಿ, ನ. ೧೮: ಬೀದಿ ನಾಯಿ ಗಳನ್ನು ಸ್ಥಳಾಂತರಿಸಲು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ) ಕನಿಷ್ಟ ಒಂದು ಎಕರೆ ಜಾಗ ಕಾಯ್ದಿರಿಸಿ ಸುತ್ತಲೂ ಗೋಡೆ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಣ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಯಿ ಕಡಿತಕ್ಕೆ ತುತ್ತಾಗುವವರ ಸಂಖ್ಯೆ ಅಧಿಕವಾಗಿದೆ. ಸುಪ್ರಿಂಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕು, ನಗರಾಭಿವೃದ್ದಿ, ಪಂಚಾಯತ್ ರಾಜ್, ಪಶುಪಾಲನೆ ಹಾಗೂ ಪಶು ವೈದ್ಯಕೀಯ, ಶಿಕ್ಷಣ, ಸಾರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯುವ ಸಬಲೀಕರಣ ಸೇರಿದಂತೆ ವಿವಿಧ ಇಲಾಖೆಗಳು ಬೀದಿ ನಾಯಿಗಳ ಹಾವಳಿ ನಿಯಂತ್ರಣ ಬಗ್ಗೆ ಸೂಕ್ತ ಕ್ರಮವಹಿಸಬೇಕು.

ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕಿದೆ ಎಂದರು.

ಬೀದಿನಾಯಿಗಳನ್ನು ಸ್ಥಳಾಂತರಿಸಲು ಕ್ರಮವಹಿಸುವುದು, ಸೂಕ್ತ ರಕ್ಷಣೆ ಮಾಡು ವಲ್ಲಿ ಮುನ್ನೆಚ್ಚರ ವಹಿಸುವುದು, ನೋಡಲ್ ಅಧಿಕಾರಿಗಳನ್ನು ನಿಯೋಜಿಸುವುದು, ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡುವಲ್ಲಿ ಆಗಾಗ ಪರಿಶೀಲಿಸುವುದು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ‘ರೇಬೀಸ್ ನಿರೋಧಕ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್’ ಚುಚ್ಚುಮದ್ದಿನ ದಾಸ್ತಾನು ಮಾಡಿಕೊಳ್ಳುವುದು, ನಾಯಿ ಕಡಿತಕ್ಕೆ ಒಳಗಾದವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಹೇಳಿದರು. ನಾಯಿ ಅಥವಾ ಇತರ ಯಾವುದೇ ಪ್ರಾಣಿಯ ಕಡಿತದ ಪ್ರಕರಣಗಳು ವರದಿಯಾದಾಗ ಸಂಬAಧಪಟ್ಟ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಬೇಕು. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ತುರ್ತು ವೈದ್ಯಕೀಯ ಸೇವೆಗಳು ಮತ್ತು ಪ್ರಥಮ ಚಿಕಿತ್ಸೆಯನ್ನು ಕಾಲಮಮಿತಿಯಲ್ಲಿ ಒದಗಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್; ಬೀದಿ ನಾಯಿ ಸ್ಥಳಾಂತರಕ್ಕೆ ನಗರದ ಹೊರವಲಯದ ಸ್ವೀವರ್ಟ್ ಹಿಲ್ ಬಳಿ ನಗರಸಭೆಯ ಒಂದೂವರೆ ಎಕರೆ ಜಾಗ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ, ಗೋಣಿಕೊಪ್ಪ ವ್ಯಾಪ್ತಿಗಳಲ್ಲಿ ಜಾಗ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಕಾಯ್ದಿರಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಬೀದಿನಾಯಿಗಳ ಕಡಿತದಿಂದ ಉಂಟಾಗುವ ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಬೀದಿ ನಾಯಿ ಹಾವಳಿ ನಿಯಂತ್ರಣ ಸಂಬAಧ ಪಶುಪಾಲನೆ ಇಲಾಖೆಯವರು ಮೇಲ್ವಿಚಾರಣೆ ಮಾಡಬೇಕು. ಈ ಎಲ್ಲಾ ಕಾರ್ಯಗಳನ್ನು ಡಿಸೆಂಬರ್ ಒಳಗೆ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ೨೦೨೪ ರ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಲ್ಲಿ ೪,೮೭೨ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಹಾಗೆಯೇ ೨೦೨೫ ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ೪,೨೧೭ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಅವರು ಬೀದಿನಾಯಿಗಳ ಹಾವಳಿ ನಿಯಂತ್ರಣ ಸಂಬAಧ ಸ್ಥಳೀಯ ಸಂಸ್ಥೆಗಳ ಜೊತೆ ಕೈಜೋಡಿಸಿ, ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಭೂ ದಾಖಲೆಗಳ ಉಪ ನಿರ್ದೇಶಕ ನಿರಂಜನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ಗಿರೀಶ್, ನಾಚಪ್ಪ, ಗೋಪಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್, ಇತರರು ಇದ್ದರು.