ಮಡಿಕೇರಿ, ನ. ೧೮: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಂದಾಯ ಗ್ರಾಮಗಳಾದ ಕಾಲೂರು ಹಾಗೂ ಹಮ್ಮಿಯಾಲ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸುವ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಸಭೆ ನಡೆಸಿ ತೀರ್ಮಾನಿಸಿದಂತೆ ಕಾಲೂರು ಗ್ರಾಮಕ್ಕೆ ತಂಬಾಕು ಕೋಶದ ತಂಡ ಭೇಟಿ ನೀಡಿ ಮಹಿಳಾ ಸಂಘದ ಸದಸ್ಯರುಗಳಿಗೆ ಈ ಕುರಿತು ಮಾಹಿತಿ ನೀಡಿ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಮತ್ತು ದುಷ್ಪರಿಣಾಮಗಳ ಕುರಿತು ವಿವರಣೆ ನೀಡಿದರು.

ಮನೆಗಳಿಂದಲೇ ತಂಬಾಕು ಮುಕ್ತಗೊಳಿಸಲು ಮಹಿಳೆಯರು ಮುಂದೆ ಬರುವಂತೆ ತಿಳಿಸಿ, ಮುಂದಿನ ಪೀಳಿಗೆಗಳಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಲಾಯಿತು. ಗ್ರಾಮದಲ್ಲಿ ಎಲ್ಲರ ಸೇರಿ ತಂಬಾಕು ಮಾರಾಟ ಮತ್ತು ಉತ್ಪನ್ನಗಳಿಗೆ ಅವಕಾಶ ನೀಡದೆ ಮಾದರಿ ಗ್ರಾಮವನ್ನಾಗಿಸಲು ಎಲ್ಲರ ಸಹಕಾರ ಕೋರಿದರು.

ಜಿಲ್ಲಾ ತಂಬಾಕು ಕೋಶದ ಪುನೀತ, ಮಂಜುನಾಥ್ ತಂಬಾಕು ಮುಕ್ತ ಗ್ರಾಮದ ಮಾರ್ಗಸೂಚಿ ಕುರಿತು ವಿವರಿಸಿ ಈ ಗ್ರಾಮದಿಂದಲೇ ತಂಬಾಕು ನಿರ್ಮೂಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇತರರಿಗೆ ಪ್ರೇರಣೆ ಆಗುವಂತೆ ಕರೆ ನೀಡಿದರು.

ಸಭೆಯಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಕಾವೇರಮ್ಮ, ಉಪಾಧ್ಯಕ್ಷೆ ಜಮುನಾ ಮತ್ತು ಸದಸ್ಯರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದೇವಕಿ, ಸಮುದಾಯ ಆರೋಗ್ಯ ಅಧಿಕಾರಿ ಯಶೋಧ, ಆಶಾ ಕಾರ್ಯಕರ್ತೆ ರೇಖಾ ಹಾಗೂ ಪಂಚಾಯಿತಿ ಅಧಿಕಾರಿ ಮನುಕುಮಾರ್ ಹಾಜರಿದ್ದರು.