ವೀರಾಜಪೇಟೆ, ನ. ೧೮: ಕ್ರೀಡಾಕೂಟಗಳಿಂದ ಪರಸ್ಪರ ಸಾಮರಸ್ಯ ಬೆಳೆಯುವುದರ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಕ್ತಿಯು ಸದೃಢರಾಗಲು ಸಾಧ್ಯ ಎಂದು ವೀರಾಜಪೇಟೆಯ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ಮದಲೈಮುತ್ತು ಅಭಿಪ್ರಾಯಪಟ್ಟರು.
ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಗೋಣಿಕೊಪ್ಪಲಿನ ಕೂರ್ಗ್ ಪಿ.ಯು. ಕಾಲೇಜಿನ ಸಹಯೋಗದಲ್ಲಿ ಸಂತ ಅನ್ನಮ್ಮ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾಸಂಸ್ಥೆಗಳ ನಡುವೆ ಜರುಗುವ ಕ್ರೀಡಾಕೂಟಗಳಿಂದ ಪರಸ್ಪರ ಸಹಕಾರ, ಅನ್ಯೋನ್ಯತೆ ಬೆಳೆಯುತ್ತದೆ. ಓದಿನ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡಾಕೂಟಗಳು ಬಾಂಧವ್ಯದ ಸಂಕೇತಗಳಾಗಿವೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾ ಸ್ಫೂರ್ತಿಯನ್ನು ಮೆರೆಯಬೇಕು ಎಂದರು.
ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಯು ಅತೀ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಮೊಬೈಲ್‌ಗೀಳಿಗೆ ಬಲಿಯಾಗದೆ ಎಲ್ಲಾ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಕ್ರೀಡೆ ಅತೀ ಪ್ರಮುಖವಾಗಿದೆ ಎಂದರು.
ಜಿಲ್ಲಾಮಟ್ಟದ ಬಾಲಕಿಯರ ಹ್ಯಾಂಡ್‌ಬಾಲ್‌ನಲ್ಲಿ ವೀರಾಜಪೇಟೆ ತಾಲೂಕು ತಂಡವು ಮಡಿಕೇರಿ ತಾಲೂಕು ತಂಡದ ವಿರುದ್ಧ ಫೈನಲ್ ಪಂದ್ಯಾಟದಲ್ಲಿ ೬-೩ ರ ಅಂತರದಿAದ ಗೆಲುವನ್ನು ಸಾಧಿಸಿತು. ಬಾಲಕರ ಹ್ಯಾಂಡ್‌ಬಾಲ್ ವಿಭಾಗದಲ್ಲಿಯೂ ಸಹ ವೀರಾಜಪೇಟೆ ತಾಲೂಕು ತಂಡವು ಫೈನಲ್ ಪಂದ್ಯದಲ್ಲಿ ಮಡಿಕೇರಿ ತಂಡದ ವಿರುದ್ಧ ಸೆಣಸಿ ೭-೫ ರ ಅಂತರದಿAದ ಜಯಗಳಿಸಿ ಎರಡು ವಿಭಾಗದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಪAದ್ಯಾವಳಿಯ ತೀರ್ಪುಗಾರರಾಗಿ ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ. ರಾಜ ರೈ ಹಾಗೂ ಕೂಡಿಗೆ ಸೈನಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೋಹೆಲ್ ಕಾರ್ಯನಿರ್ವಹಿಸಿದರು. ಅತಿಥಿಗಳು ವಿಜೇತ ತಂಡಗಳಿಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಪ್ಸ್ ವಿದ್ಯಾಸಂಸ್ಥೆಯ ಕ್ಯಾಂಪಸ್ ವ್ಯವಸ್ಥಾಪಕ ಸೋಮಯ್ಯ, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರುಗಳು, ಕ್ರೀಡಾಪಟು ವಿದ್ಯಾರ್ಥಿಗಳು, ಕಾಪ್ಸ್ ವಿದ್ಯಾಸಂಸ್ಥೆಯ ಉಪನ್ಯಾಸಕರು, ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಜ್ಯಮಟ್ಟದ ಪಂದ್ಯಾವಳಿಯು ಚಿಕ್ಕೋಡಿಯಲ್ಲಿ ಡಿಸೆಂಬರ್ ೭ ಹಾಗೂ ೮ ರಂದು ನಡೆಯಲಿದೆ.