ಸೋಮವಾರಪೇಟೆ, ನ. ೧೭: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದಿನನಿತ್ಯ ಬೆಲೆಏರಿಕೆ, ತೆರಿಗೆ ಏರಿಕೆ ಮೂಲಕ ಜನಸಾಮಾನ್ಯರ ಬದುಕು ದುಸ್ತರಗೊಳಿಸಿದೆ. ಇದರೊಂದಿಗೆ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದು ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ವಿವೇಕಾನಂದ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಜೇಸೀ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಪ್ರಮುಖ ನಾಯಕರು ಮಾತನಾಡಿದರು.
ಮಾಜೀ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡಿ, ಕೊಡಗು ಜಿಲ್ಲೆಗೆ ಬಿಜೆಪಿ ಶಾಸಕರ ಅವಧಿಯಲ್ಲಿ ಹತ್ತಾರು ಸೌಲಭ್ಯಗಳನ್ನು ತಂದಿದ್ದಾರೆ. ಬಿಜೆಪಿ ಸರ್ಕಾರ ಕೊಡಗಿನ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ರೈತರು ಸೇರಿದಂತೆ ಜನಸಾಮಾನ್ಯರಿಗೆ ದಿನನಿತ್ಯ ಕಿರುಕುಳವನ್ನೇ ನೀಡುತ್ತಿದೆ ಎಂದು ಆರೋಪಿಸಿದರು.
ರೈತ ವಿರೋಧಿ ಕಾಯ್ದೆ
ಬೆಲೆ ಏರಿಕೆ, ತೆರಿಗೆ ಏರಿಕೆ, ರೈತರ ಜಮೀನುಗಳನ್ನು ಅರಣ್ಯವನ್ನಾಗಿಸುವ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಯಾವಾಗ ಕೊನೆಗೊಳ್ಳುತ್ತದೋ ಎಂಬುದನ್ನು ಜನತೆ ಕಾಯುತ್ತಿದ್ದಾರೆ. ಒಂದು ವೇಳೆ ಸಂಪುಟ ಪುನರ್‌ರಚನೆಯಾದರೆ ತಿಂಗಳೊಳಗೆ ಸರ್ಕಾರ ಕುಸಿಯಲಿದೆ. ಅವಧಿಗೂ ಮುನ್ನವೇ ಚುನಾವಣೆ ನಡೆಯಲಿದೆ. ಆಗ ಬಿಹಾರದ ಫಲಿತಾಂಶಕ್ಕಿAತಲೂ ಭರ್ಜರಿ ಜಯದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲಿದೆ ಎಂದರು.
ಅಧಿಕಾರಿಗಳ ಆತ್ಮಹತ್ಯೆ
ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಅಪಪ್ರಚಾರ, ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್, ಎಲ್ಲೆಡೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಗ್ಯಾರಂಟಿ ಯೋಜನೆಗೆ ೧ ಲಕ್ಷ ಕೋಟಿ ಕೊಟ್ಟಿದ್ದು, ೧.೫೦ ಲಕ್ಷ ಕೋಟಿ ತೆರಿಗೆ ಹೆಚ್ಚಿಸಿದ್ದಾರೆ. ಇವರ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಳ್ಳಲು ತಯಾರಿಲ್ಲದ ಸರ್ಕಾರಿ ಅಧಿಕಾರಿಗಳು ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಆರೋಪಿಸಿದರು.
ಕಾಯ್ದೆಗಳ ರದ್ದು
ಕಾಂಗ್ರೆಸ್ ಸರ್ಕಾರದಲ್ಲಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿವೆ. ಕನಿಷ್ಟ ಔಷಧಿ ಮಾತ್ರೆ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)
ಒದಗಿಸುವಲ್ಲೂ ಸರ್ಕಾರ ವಿಫಲವಾಗಿದೆ. ಇತಿಹಾಸದಲ್ಲಿ ಇಂತಹ ರೈತ, ಜನಸಮಾನ್ಯರ ವಿರೋಧಿ ಸರ್ಕಾರ ಬಂದಿರಲಿಲ್ಲ ಎಂದ ಅವರು, ಬಿಜೆಪಿ ಸರ್ಕಾರ ರಚನೆಯಾದಂತೆ ಸಿ ಮತ್ತು ಡಿ ಜಾಗ ಸಮಸ್ಯೆ ಬಗೆಹರಿಸಿ ಎಲ್ಲಾ ರೈತರಿಗೂ ಹಕ್ಕುಪತ್ರ ನೀಡುತ್ತೇವೆ. ಎಲ್ಲಾ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ ಎಂದರು.
೧೩ ಸಾವಿರ ಹಕ್ಕುಪತ್ರ
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಿ ಮತ್ತು ಡಿ ಜಾಗದ ವಿಚಾರದಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರದಿಂದ ನೋಟಿಸ್‌ಗಳು ನಿಂತಿಲ್ಲ. ಕಳೆದ ೨೫ ವರ್ಷ ತಾನು ಶಾಸಕನಾಗಿದ್ದ ಸಂದರ್ಭ ರೈತರಿಗೆ ಕಿರುಕುಳವಾಗುವ ಒಂದೇ ಒಂದು ನೋಟಿಸ್ ಬಂದಿರಲಿಲ್ಲ ಎಂದರು.
ಕಳೆದ ತಾ.೫.೬.೨೦೧೭ ರಲ್ಲಿ ಸಿ ಮತ್ತು ಡಿ ಲ್ಯಾಂಡ್‌ನಲ್ಲಿ ಕೃಷಿ ಮಾಡಿಕೊಂಡಿರುವ ರೈತರಿಗೆ ಫಾರಂ ೫೦ ಅಡಿಯಲ್ಲಿ ದಾಖಲೆ ಕೊಡಬೇಕು ಎಂದು ಸರ್ಕಾರ ಆದೇಶಿಸಿದೆ. ತಾ. ೨೫.೬.೨೦೧೯ರಲ್ಲಿ ಫಾರಂ ೫೩ ರಡಿ ಹಕ್ಕುಪತ್ರ ನೀಡಲು ಆದೇಶವಾಗಿದೆ. ತಾನು ಶಾಸಕನಾಗಿದ್ದ ಅವಧಿಯಲ್ಲಿ ೯೪ ಸಿ. ಹಾಗೂ ೯೪ ಸಿ.ಸಿ. ಅಡಿಯಲ್ಲಿ ೧೩ ಸಾವಿರ ಮಂದಿಗೆ ಹಕ್ಕುಪತ್ರ ನೀಡಲಾಗಿದೆ.
ವಿಧಾನ ಸಭೆಯಲ್ಲಿ ಹೋರಾಡಬೇಕು
ಜಾಗದ ದುರಸ್ತಿ, ಸಿ ಮತ್ತು ಡಿ ಜಾಗ ಸಮಸ್ಯೆ ಬಗ್ಗೆ ರೈತರು ಕಂದಾಯ ಸಚಿವರನ್ನು ಭೇಟಿ ಮಾಡಲು ಹೋದಾಗ ಕಾಂಗ್ರೆಸ್ ಸಚಿವರು ಹಾಗೂ ನಾಯಕರು ಸ್ಪಂದಿಸದೇ ಅಪಮಾನ ಮಾಡಿದ್ದಾರೆ. ಈ ಹಿಂದೆ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗೆ ತಾನು ಹಾಗೂ ಕೆ.ಜಿ. ಬೋಪಯ್ಯ ವಿಧಾನ ಸಭೆಯಲ್ಲಿ ವಿರೋಧ ಮಾಡಿದ್ದೆವು. ಸ್ಪೀಕರ್ ಕೆಲಸ ಬೇಡ ಎಂದು ಬೋಪಯ್ಯ ಹೇಳಿದರೆ; ಮಂತ್ರಿಯಾಗಿದ್ದರೂ ತಾನು ಸದನದ ಬಾವಿಗೆ ಇಳಿದು ಕೊಡಗಿಗೋಸ್ಕರ ಪ್ರತಿಭಟನೆ ಮಾಡಿದ್ದೇನೆ. ಜನಪ್ರತಿನಿಧಿಯಾಗಿ ರೈತರ ಸಮಸ್ಯೆಯನ್ನು ಬಗೆಹರಿಸಲು ವಿಧಾನ ಸಭೆಯಲ್ಲೂ ಹೋರಾಡಬೇಕು ಎಂದು ಕುಟುಕಿದರು.
೩೧೦ ಕೋಟಿ ಪರಿಹಾರ
ರೈತ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರದಿಂದ ಕೊಡಗಿನ ಅಭಿವೃದ್ಧಿ ಸಾಧ್ಯವಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕ್ಷೇತ್ರಕ್ಕೆ ೧,೮೦೦ ಕೋಟಿ ಅನುದಾನ ಬಂದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮಳೆಯಿಂದ ಹಾನಿಯಾದ ಬೆಳೆಗೆ ಈವರೆಗೆ ಬಿಡಿಗಾಸೂ ನೀಡಿಲ್ಲ. ನಮ್ಮ ಸರ್ಕಾರವಿದ್ದ ಸಂದರ್ಭ ಒಟ್ಟು ೩೧೦ ಕೋಟಿ ಪರಿಹಾರ ಕೊಟ್ಟಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಎನ್.ಡಿ.ಆರ್.ಎಫ್. ಅನುದಾನವನ್ನು ಕಾಂಗ್ರೆಸ್‌ನವರ ತೋಟಕ್ಕೆ, ಮನೆಗಳಿಗೆ ರಸ್ತೆ ಮಾಡಲು ಬಳಸಲಾಗುತ್ತಿದೆ ಎಂದ ಬೋಪಯ್ಯ, ನಮ್ಮ ಅವಧಿಯಲ್ಲಿ ಕೊಡಗಿಗೆ ಇಂಜಿನಿಯರಿAಗ್, ಮೆಡಿಕಲ್ ಕಾಲೇಜು, ಡಿ.ಸಿ.ಕಚೇರಿ, ತಾಲೂಕು ಸೌಧ, ಹೋಬಳಿ ಮಟ್ಟದಲ್ಲಿ ರೆವಿನ್ಯೂ ಕಚೇರಿ, ಆಸ್ಪತ್ರೆಗಳನ್ನು ಮಾಡಿದ್ದೇವೆ. ಕಾಂಕ್ರಿಟ್ ರಸ್ತೆಗಳು ನಿರ್ಮಾಣವಾಗಿವೆ. ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮಿತಿಮೀರಿದೆ. ಕ್ರಿಕೆಟ್ ಸ್ಕೋರ್ ಲೆಕ್ಕ ಹಾಕುವಂತೆ ಅಮಾಯಕರ ಸಾವನ್ನು ಲೆಕ್ಕಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವನ್ಯಪ್ರಾಣಿ ಹಾವಳಿ ನಿಯಂತ್ರಣಕ್ಕೆ ನಮ್ಮ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ೧೨೦ ಕೋಟಿ ಇಡಲಾಗಿತ್ತು. ಈ ಅನುದಾನ ಬಿಹಾರ ಚುನಾವಣೆಗೆ ಹೋಯಿತಾ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದರು.
ಹಿAದಿನ ಅನುದಾನ ಬಳಕೆ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ಹಿಂದಿನ ಬಿಜೆಪಿ ಶಾಸಕರು ಕೊಡಗಿಗೆ ಸಮಸ್ಯೆಯಾದಾಗ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸದನದಲ್ಲಿ ಪ್ರತಿಭಟನೆ ಮಾಡಿದರು. ಇಂದಿನ ಶಾಸಕರು ಸಿ ಮತ್ತು ಡಿ ಜಾಗ ವಿಚಾರದಲ್ಲಿ ಸದನದಲ್ಲಿ ಹೋರಾಡುವ ಬದಲು ಇಲ್ಲೇ ನಿಂತು ರೈತರೊಂದಿಗೆ ಹೋರಾಡುತ್ತೇವೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗೆಹರಿಯುತ್ತಿಲ್ಲ. ವಿಧಾನ ಸಭೆಯಲ್ಲಿ ವಿಫಲರಾಗಿರುವ ಶಾಸಕರುಗಳು, ಇಲ್ಲಿ ಜನತೆಯನ್ನು ಮುಟ್ಠಾಳರನ್ನಾಗಿ ಮಾಡುತ್ತಿದ್ದಾರೆ. ಇದು ನಾಚಿಕೆಗೇಡು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ವಾಲ್ಮೀಕಿ ನಿಗಮ, ಮೂಡಾ ಹಗರಣಗಳು ಸಾಕ್ಷಿಯಾಗಿವೆ. ಅಭಿವೃದ್ದಿ ಸ್ಥಗಿತಗೊಂಡಿದೆ. ಇದರಿಂದಾಗಿ ದೆಲ್ಲಿಯಿಂದ ಹಳ್ಳಿಯವರೆಗೂ ಬಿಜೆಪಿಯ ಅಭಿವೃದ್ಧಿ ರಾಜಕಾರಣ ಮೆಚ್ಚುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮಂಡಲ ಅಧ್ಯಕ್ಷ ಗೌತಮ್ ಗೌಡ, ಮುಖಂಡರಾದ ಹರಪಳ್ಳಿ ರವೀಂದ್ರ, ವಿ.ಕೆ. ಲೋಕೇಶ್, ನವೀನ್ ಗೌಡ, ಮಹೇಶ್ ಜೈನಿ, ಮಹೇಶ್ ತಿಮ್ಮಯ್ಯ, ಅನಿತಾ ಪೂವಯ್ಯ, ರವಿ ಮೊಗೇರ, ಹೊಸೂರು ಸತೀಶ್ ಜೋಯಪ್ಪ, ಮೋಹಿತ್ ತಿಮ್ಮಯ್ಯ, ಕವಿತಾ ವಿರೂಪಾಕ್ಷ, ರಾಮಕೃಷ್ಣ, ಮಚ್ಚಂಡ ಪ್ರಕಾಶ್, ಸುನಿಲ್ ಸುಂಟಿಕೊಪ್ಪ, ಅಭಿಮನ್ಯುಕುಮಾರ್, ಮನುಕುಮಾರ್, ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ, ಎಸ್.ಆರ್. ಸೋಮೇಶ್ ಸೇರಿದಂತೆ ಇತರರು ಇದ್ದರು.