ಮಡಿಕೇರಿ, ನ. ೧೭: ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪದ ಕೂರ್ಗ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ತಾಲೂಕು ತಂಡ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಇಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ತಾಲೂಕು ಪರವಾಗಿ ಭಾಗವಹಿಸಿದ್ದ ಕೂಡಿಗೆ ಕ್ರೀಡಾನಿಲಯದ ಹಾಕಿ ಬಾಲಕರು ಪಾಲ್ಗೊಂಡಿದ್ದ ಕುಶಾಲನಗರ ಅನುಗ್ರಹ ಕಾಲೇಜು ತಂಡ ಜಯಗಳಿಸಿದೆ. ವೀರಾಜಪೇಟೆ ತಾಲೂಕು ಪರವಾಗಿ ಭಾಗವಹಿಸಿದ್ದ ಪೊನ್ನಂಪೇಟೆಯ ಸಿಐಟಿ ಪ.ಪೂ. ಕಾಲೇಜು ತಂಡವನ್ನು ಸೋಮವಾರಪೇಟೆ ತಂಡ ಭರ್ಜರಿ ೫-೭ ಗೋಲುಗಳ ಅಂತರದಿAದ ಸೋಲಿಸುವುದರೊಂದಿಗೆ ಜಯ ಸಾಧಿಸಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ. ಮುಂದಿನ ತಾ. ೨೭ ರಂದು ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ತಂಡ ಭಾಗವಹಿಸಲಿದೆ. ತಂಡಕ್ಕೆ ಕೂಡಿಗೆ ಕ್ರೀಡಾ ನಿಲಯದ ತರಬೇತುದಾರ ವೆಂಕಟೇಶ್ ತರಬೇತಿ ನೀಡಿದ್ದರು.
ಇದಕ್ಕೂ ಮುನ್ನ ನಡೆದ ಪಂದ್ಯಾವಳಿಯಲ್ಲಿ ಸಿಐಟಿ ತಂಡವು ಮಡಿಕೇರಿಯ ಸಂತ ಮೈಕಲರ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿ ಅಂತಿಮ ಹಂತಕ್ಕೆ ಪ್ರವೇಶಿಸಿತ್ತು.
ಇಂದಿನ ಅಂತಿಮ ಪಂದ್ಯಾವಳಿಗೆ ಅತಿಥಿಗಳಾಗಿ ಕೂರ್ಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ರಾಮಚಂದ್ರನ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಧನ್ಯ ಸುಬ್ಬಯ್ಯ ಅವರುಗಳು ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ತೀರ್ಪುಗಾರರಾಗಿ ತಮ್ಮಯ್ಯ, ನಿರೂಪ್, ಮಿಲನ್ ಹಾಗೂ ತಾಂತ್ರಿಕ ವಿಭಾಗದಲ್ಲಿ ಕಾವ್ಯ ಕಾರ್ಯನಿರ್ವಹಿಸಿದರು.